ಗುರುವಾರ, ಏಪ್ರಿಲ್ 23, 2015

ಮುಂದಿರುವ ಮರ - ಇಳಿಸಿತೆಲ್ಲಾ ಮನದ ಭಾರ..


ಹಿಂದೆ ಏನೇನೋ ಸಿಕ್ಕಿದೆಲ್ಲವ ಸರಿಸಿ
ಕಾಣದ್ದೆನ್ನನೋ ಪಡೆಯುವ ಉತ್ಕಟ ಹಂಬಲ
ಬೇಕಿರುವುದು ಕಾಡ ಮಧ್ಯೆ
ಧುಪ ಮರದ ಮೇಲೆ ಆಡುವ ಚಿಟ್ಟೆಗಾನವೋ
ಪಟ್ಟಣದ ಪೊರಕಿಗಳ ಬಾಹು ಬಂಧನವೋ
ಆಡಿದ್ದೆಲ್ಲವ ಕೇಳುವ ಬಂಡೆ ಕಲ್ಲೋ
ಆಡಲೇ ಬಿಡದೆ ಭೋರ್ಗರೆಯುವ ಕಡಲ ಕಿನಾರೆಯೋ
ಲಜ್ಜೆಗೆ ಮೀರಿದ್ದೋ
ಬಂದು ಮತ್ತೆಂದೂ ಬಾರದೆ ಮಾಯವಾಗೋ ಕ್ಷಣಿಕವೋ
ಒಂದೂ ಅರಿಯೇ..

ಗಾಳಿ ಮಧ್ಯೆ ಮಾತು ಹಂಚುತ್ತಿರುವ ನಿನ್ನ ಕಂಡೆ
ಮೌನ ಮುದ್ದಾಡಿತು, ಅಲುಗದೆ ಅನುಭವಿಸಿದೆ
ದೂರ ಹರಿಯುವ ನೀರ ಹೊಳೆ
ಕಿವಿ ಪದರದ ತುದಿಗೆ ಜೀವ ಬಂತಂತೆ!
ಒಳಗೆ ಒಂದೇ ಸಮನೆ ಹರಟುತ್ತಿದ್ದೇ
ಕೇಳುವರಾರಿಲ್ಲವೆಂಬ ಪರಿವೂ ಇಲ್ಲದೆ
ನನಗೂ ಬೇಕಿರುವುದು ಇಷ್ಟೇ..
ಹಬೆ ಆರದ ನೆಮ್ಮದಿಯ ಬದುಕಿಗೆ
ರವಷ್ಟು ತುಪ್ಪ ಸುರಿದ ಅಡಿಗೆ.


ಬೇಕು ಎನಿಸುವುದೇ ಒಂದು ಬ್ರಹ್ಮೆ
ಬೇಕಿರುವುದ್ದೆಲ್ಲವೂ ನಮ್ಮಲ್ಲೇ ಇದೇ
ಅಚಲ ಬೇರೂರಿ ನಿಂತರೆ ಸಾಕು
ನಮಗೆ ಬೇಕಿರುವುದು ಕೆಲವೊಮ್ಮೆ ನಮ್ಮನ್ನೂ ಹುಡುಕುವುದುಂಟಂತೆ..


ಶನಿವಾರ, ಜನವರಿ 10, 2015

ಕಿರಿಯ ತಿಳುವಳಿಕೆ..

ಮೊದಲ ಉಸಿರ ಕೊಡುಗೆ ಕೊಟ್ಟು
ಸೂಕ್ಷ್ಮ ಪದರಗಳ ಸದ್ದಿಲ್ಲದೆ ಉದ್ಭವಿಸಿದೆ
ಅಣು ಅಣುವಿನ ಬೆಳವಣಿಗೆಯಲು ನಾನು ನಿನ್ನ ಜೊತೆಗಿದ್ದೆ
ಪ್ರಾಣದ ಬೆಲೆ ಕಟ್ಟಿದ್ದೇನೆ; ಹೊಕ್ಕುಳಲಿ
ನೀನು ನನ್ನದಾಗಬೇಕೆಂಬ ಒಂದೇ ಒಂದು ಕರಾರಿಗೆ ಓಗೊಟ್ಟು

ನಾನು ಹೆತ್ತದ್ದು ಎಂದು ಹೀಗೆ ಬೀಗಲೇ ಇಲ್ಲಾ ಆಕೆ
ನಾ ಯಾಕೆ ಬೀಗುತಿರುವೆ ಬರಿಯ ಹುಟ್ಟಿದ ಮಾತ್ರಕೆ..

ನಡು ನೋವುವವರೆಗೂ ಹೊತ್ತು ಅಲೆದಿದ್ದೇನೆ
ನಡೆ ನೆಟ್ಟಗಾಗುವರೆಗೂ
ನೀನು ತಿಂದು ಜೀರ್ಣಿಸಿ ಪಚನ ಗೊಳಿಸುವ
ಜೀವಯಂತ್ರಗಳ ಉಧ್ಘಾಟಿಸಿದ್ದೇ ನಾನು!
ಮೊಲೆ  ಜಗ್ಗಿಸಿ,ಮನ ಹಿಗ್ಗಿಸಿ
ಇರುಳುಗಳ ಹಗಲಂತೆ ಕಳೆದಿದ್ದೇನೆ;ಪಕ್ಕದಲಿ
ನಾನೇ ಶೃಷ್ಠಿಸಿದ ಪವಾಡ ಪ್ರತಿಮೆಯ  ಆರೈಕೆಯಲಿ

ನಾನೇ ಹೆತ್ತದ್ದು ಎಂದು ಹೀಗೆ ಬೀಗಲೇ ಇಲ್ಲಾ ಆಕೆ
ನಾ ಯಾಕೆ ಬೀಗುತಿರುವೆ ಬರಿಯ ಹುಟ್ಟಿದ ಮಾತ್ರಕೆ..

ಶನಿವಾರ, ಅಕ್ಟೋಬರ್ 18, 2014

ವರ್ಷವತಿ..

ಹೀಗೆ ಕೈಗಳ ತುಟಿಯಾಗಿಸಿ ನಿಂತುಬಿಡಬೇಕು
ಒಮ್ಮೊಮ್ಮೆ ಮಗುವಂತೆ ಬಯಲಲಿ
ಜೊಂಪು ನಿದ್ದೆಯಲು ಕಣ್ಣ ಅರಳಿಸಿ
ನನಗೆಷ್ಟು? ನನ್ನ ಕಿರು ತುಟಿಗಳ ಅಂಚಿನಿಂದ ಚಿಮ್ಮಿ ದಕ್ಕಿದ್ದು, ಭವನೆ
ನಿನಗೆಷ್ಟು? ಎಂದು ಲೆಕ್ಕಹಾಕಬೇಕು..ಮೈಮರೆತು
ಈ ವರ್ಷವತಿಯ ಮಡಿಲಲಿ
ಹೊದ್ದು ಮಲಗಿಸುವ ಸುಖದ ವಿನೋದಕಲ್ಲಾ
ಸೃಷ್ಟಿಯ ವಿಕಾಸಕ್ಕಾಗಿ.

ಬೊಗಸೆ ಹಿಡಿದ ಸಿಹಿ ನೀರಲೊಮ್ಮೆ ಮುಳುಗೆದ್ದು ಬರಬೇಕು
ಇದೇ ಪ್ರಥಮದಲಿ ತಳ ಅನ್ವೇಷಣೆಗಾಗಿ ಹೊರಟ ಮೀನಿನಂತೆ,ಅದೃಶ್ಯವಾಗಿ
ಹುಡುಕುವುದೇ ಹುಟ್ಟು ಎಂದಾಗ,ಮತ್ತೆ ಮತ್ತೆ ಹುಟ್ಟಿಬರಬೇಕು
ಗರ್ಭದೊಳಗಿನ ಭ್ರೂಣ
ಕೊಳವೂ ನಮ್ಮದೇ ,ಮೀನೂ ನಾವೇ
ತಳ ಮುಟ್ಟುವ ಆಟಕಿದೊಂದು ನೆವ ಮಾತ್ರ.

ಶನಿವಾರ, ಸೆಪ್ಟೆಂಬರ್ 6, 2014

ಅರಿವಾಗುತ್ತಿದೆ 
ಅರಿವಾಗುವ ವಿಧಿ ವಿಧಾನ
ನನಗರಿವಾದದ್ದು ಪರರಿಗದು ಮಿತವಾದರೆ
ಪರಮಾತ್ಮನಾ ಚಿತ್ತವೂ ಸಹ ದೂಷಣೆಗೆ ಅರ್ಹ 

ವಿಮರ್ಶೆಗೆಂದು ಬಂದವ
ವಾದಗಳ ವರಮಾನ ಬೇಡವೆಂದಾನೇ?
ವಾದಕ್ಕಿಳಿದ ಮನಸ್ಸು ಮುಳ್ಳಿರದ ತಕ್ಕಡಿಯಿದ್ದಂತೆ
ದೂಷಿಸಲ್ಹೊರಟವ ಈಗ ದೂಷಣೆಗೆ ಅರ್ಹ!

ನನಗೂ ನಿನಗೂ ಕಂಡ ಒಂದು
ಬೇರೊಬ್ಬನಿಗೆ ನೂರೆನಿಸಿದರೆ
ಕಂಡದ್ದನ್ನೂ,ಅನಿಸಿದ್ದನ್ನೂ ತೂಗಿ ಹಾಕಬೇಕೆ?
ಮನಸಿಗೊಮ್ಮೆ ನಾಟಿದ್ದೇ ಮೆದುಳೊರೆಗೆ ಅರಿವಾಗಿ ಬೆಳೆದದ್ದಲ್ಲವೇ!

ಆಗೆಂದೋ ನಾಟಿದ್ದು ,ಈಗೇಕೆ ಮರವಾಯಿತೆಂದು ಅನಿಸಿದರೆ
ಪ್ರಕೃತಿಗಂಟಿದ ಪ್ರಶ್ನೆಗಳಿವೆಲ್ಲಾ ಎಂದು ಅರಿವಾಗುತ್ತದೆ.
ಬಯಕೆಗಳನ್ಹೊತ್ತ ಬೆಟ್ಟದಂಚಿನಲಿ ಕೂತು ಕಾಯುತಿರುವೆ 
ಮುಸುಕು ಆಕೃತಿಯ ಮುರಳಿದನಿಕಂಡರೆ
ದ್ವೈತ ಮರೆತು ಐಕೈತೆಯಲಿ ಗಾನಸ್ಪರ್ಶಕಷ್ಟೇ ಸ್ಪಂದಿಸುವಾಸೆಯಾಗಿದೆ!

ಉಫ್.. ಸಮಭಾವವಿದಿದ್ದರೆ ಸಂಜೆಹೊತ್ತಿನಲಿ ಸೆಳೆದೆತ್ತೆತ್ತ ಒಯ್ಯುತಿದ್ದೆನೋ ನಾ ಕಾಣೆ!

ಜುಯ್ ಗಾಳಿಯೊಡನೆ ತೇಲಿ 
ಅಪ್ಪುವಾಸೆ ಭೋರ್ಗರೆತದಲಿ ಕೊಚ್ಚಿ ಹೋಗುವ ಮುನ್ನ ಬರಬಾರದೆ
ನಾನಿನ್ನೂ
ಬಯಕೆಗಳನ್ಹೊತ್ತ ಬೆಟ್ಟದಂಚಿನಲಿ ಕೂತು ಕಾಯುತಿರುವೆ..

ಶುಕ್ರವಾರ, ಸೆಪ್ಟೆಂಬರ್ 5, 2014

    ಸುಮ್ಮನೆ ಹಾಡುವುದೆಂದರೆ..

    ಹೊರಟೆ ಎಂದು ಎದ್ದು ನಿಂತವರ
ಕೈಹಿಡಿದು ಇರಲೇಬೇಕೆಂದು ಒಪ್ಪಿಸುವಾಗ ಎಚ್ಚರವಾಗಿ 
ಕನಸಲ್ಲೂ ಜೊತೆ ಇರದವನ ನಿಲುವು ನೆನೆದಾಗ 
ಅವಳ ಮುಂಬೆಳಗ ಮೌನದಲಿ ಹುಟ್ಟುವುದು..

ಒತ್ತರಿಸಿ ಕಾದು ಕನವರಿಸಿ 
ಹೊರಗೆ ಸೊಂಟ ಸವರಿ ವಿನಯದಿ 
ಒಳಗೆ ವಿರಹ ಬೇಗೆಯ ಪ್ರವಾದಿ
ಕರಾಳ ಮುಖ ಧರಿಸಿ ಆಲಿಂಗದ ಕವಡೆ 
ಮೊಗಚುವ ಪ್ರಿಯತಮನ ತೋಳಲ್ಲಿ ಹುಟ್ಟುವುದು..

ನೊಂದು ಮುದ್ದೆಯಾಗಿ 
ಬುಸುಗುಡುವ ಸತ್ತ ಕಲ್ಪನೆಗಳ 
ಕಣ್ಣಲೇ ಮತ್ತೆ ಮಲಗಿಸಿ
ಕಂಬನಿ ಇಂಗಿಸಿ ಸ್ವರ್ಗ ಸೇರಿಸುವಾಗ ಹುಟ್ಟುವುದು
..