ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜನವರಿ 14, 2012

೧. ನಾವು ಕಲಿಯುತ್ತಿರುವ ಶಿಕ್ಷಣ ನಮ್ಮ ಬದುಕಿಗೆ ಪೂರಕವಾಗಿದಿಯೇ ?
ಶಿಕ್ಷಣ ಎಂಥದೇ ಇರಲಿ ,ಕಲಿಕೆ ಮತ್ತು ಗ್ರಹಿಕೆಯ ಗುಣಮಟ್ಟ ಶ್ರೇಷ್ಠವಾಗಿರಬೇಕು .ಶಿಕ್ಷಣ ತಾತ್ಕಾಲಿಕ ಜ್ಞಾನವಲ್ಲ ,ಅದು ಜೀವಿಯಿಂದ ಜೀವಿಗೆ ಜೀವನವನ್ನೇ ವರ್ಗಾಹಿಸುವಂತಹದು.ಬಹುಷಃ ಇಂದು ಶಿಕ್ಷಣ ತನ್ನ ಮುಲ್ಯಗಳನ್ನು ಕಳೆಚಿ ಅರೆ ಬೆತ್ತಲೆ ನಿಂತಂತೆ ಭಾಸವಾಗುತ್ತಿದೆ.ಗಂಟೆಹಿಂದೆ ಓದಿದ್ದನ್ನ ಮತ್ತೊಂದು ಗಂಟೆಕೂತು ಕಕ್ಕುವುದಷ್ಟೇ ಇವತ್ತಿನ ಶಿಕ್ಷಣ ವ್ಯವಸ್ಥೆ ,ಹೀಗಿರುವಾಗ ಜ್ಞಾನಾರ್ಜನೆ ಹೇಗೆ ಸಾದ್ಯ!

ಹೇಳಿದ್ದೇ ಹೇಳುವರು ,ಕೇಳಿದ್ದೇ ಕೇಳುವರು
ಕೇಳಿದ್ದೇ ಕೇಳಿ ಸುಖಿಸುವರು ಜ್ಞಾನಿ
ಗಳ ಮಾರ್ಗವೇ ಬೇರೆ ಸರ್ವಜ್ಞ..

ಸರ್ವ ಜ್ಞಾನಿಯ ಈ ನುಡಿಮುತ್ತು ಸಾಕು ಇಂದಿನ ಶಿಕ್ಷಣದ ರೂಪು ರೇಖೆಯನ್ನು ತೂಗಿ ನೋಡಲು.
ಶಿಕ್ಷಣ ಎಂದಿಗೂ ಒಬ್ಬ ಮಾಮೂಲಿ ಮನುಷ್ಯನನ್ನು ಪ್ರಬುಧ್ಧ ವ್ಯಕ್ತಿಯನ್ನಾಗಿಸುವ ಚಟುವಟಿಕೆಯಂತಿರಬೇಕು ,ಮುಂದೆ ಬದುಕ ಮಹಡಿ ಕಟ್ಟುವ ಸ್ವಪ್ನದಲ್ಲಿರುವವನಿಗೆ ಪೂರಕ ಗುಣಮಟ್ಟದ ಇಟ್ಟಿಗೆ ,ನೀರು,ಸಿಮೆಂಟು ಒದಗಿಸಿ ತನ್ನ ಇಷ್ಟಾರ್ತದಂತೆ ಕಟ್ಟಡ ನಿರ್ಮಿಸುವ ದಿಕ್ಕಸೂಚಿಯಾಗಬೇಕು.ಆದ್ದರಿಂದು ಶಿಕ್ಷಣ ದುಡ್ಡಿನ ಮಹಾಮಳೆಯಡಿ ಸಮಯದ ಜೋರು ಪ್ರವಾಹಕ್ಕೆ ಸಿಕ್ಕ ಸಣ್ಣ ಹಾಯಿ ದೋಣಿಯಂತಾಗಿದೆ.ಹೀಗಿರುವಾಗ ಬೆಳವಣಿಗೆ ಹೇಗೆ ಸಾದ್ಯ!

ಮಹಾನ್ ತಪಸ್ವಿಯಂತೆ ಸುಧೀರ್ಗ ವರ್ಷಗಳ ಅಭ್ಯಾಸದ ನಂತರ ಕೊನೆಗೊಂದು ದಿನ ತನ್ನ ಕಲಿಕೆಗಿಂದು ಕೊನೆ ಎಂದು ಹೊರ ದೌಡಾಯಿಸುವ ವಿಧ್ಯಾರ್ಥಿಯ ಕೈಯಲ್ಲಿ ಪದವಿ ಪತ್ರ ಬಿಟ್ಟರೆ ಕನಿಷ್ಠ ಒಂದಾದರು ವಿಷಯದಲ್ಲಿ  ಪಾಂಡಿತ್ಯವಿರದ ಡೊಳ್ಳು ತಲೆ..ಹೋಗಲಿ ಒಂದಿಷ್ಟು ಮಾನವೀಯತೆ ,ಶೃಜನಶೀಲತೆ,ನೈತಿಕಯ ಸೊಬಗಾದರು ಬೇಡವೇ ?ಎಲ್ಲೋ ಬೆರಳೆಣಿಕೆಯ ಜನಕಷ್ಟೆ..ಇಂದಿನ ಈ ಪರಿಸ್ತಿತಿಗೆ ಕಾರಣ ,ಶಿಕ್ಷಣವೆಂದರೆ ಯುದ್ಧದಂತಾಗಿರುವುದು .ಶಿಕ್ಷಣ ದುಡಿಮೆ ಅಥವ ಭೋಗದ ವಸ್ತುವಲ್ಲ, ಅದೊಂದು ನಿರಂತರ ನಿಟ್ಟುಸಿರಿನವರೆಗೂ ಕಾಲದ ಪರಿವಿಲ್ಲದೆ ಬದುಕ ಹೆಣೆಯುವ ಕಲೆ.ಬರೀ ಪದ್ಧತಿ ,ಬಂಧನ ಮತ್ತು ಆಡಳಿತಕ್ಕೆ ಸೀಮಿತವಾಗಿರುವ ಇಂದಿನ ಶಿಕ್ಷಣ ಮುಂದಿನ ಬದುಕಿಗೆ ಪೂರಕವೇ ಅಲ್ಲಾ.

ಚಿಂತಕರ ಪ್ರಕಾರ ಸಮಾಜ ಸೇವೆ ,ಸ್ವಇಚ್ಚಿತ ಜವಾಬ್ದಾರಿ,ಸದ್ ವರ್ತನೆ ,ಸತ್ ಚಿಂತನೆಗಳಂತಹ ಕಾರ್ಯ ಯುವ ಪ್ರಜೆಗಳಿಗೆ ಹೆಚ್ಚು ವೈಭವಿಕರಿಸುತ್ತದೆ .ಚಿಂತನೆಯಲ್ಲಿ ಅಂಥ ದೊಡ್ಡ ಲೋಪ ದೋಷಗಳೇನು ಇಲ್ಲ ,ಉರಿಯುವ ಮೇಣದ ಬತ್ತಿಯೊಂದೆ ಉಳಿದ ಮೇಣದ ಬತ್ತಿಗಳನ್ನು ಉರಿಯುವಂತೆ ಮಾಡಬಲ್ಲದಲ್ಲವೇ ? ಹಾಗಂತ ಧಂಗೆ ಎದ್ದು ,ಹೋರಾಟಕ್ಕಿಳಿದು ,ಚಳುವಳಿ ಕೂಗಬೇಕಂತೆನಿಲ್ಲ.ನಮ್ಮ ನಮ್ಮ ಯೋಚನಾ ಲಹರಿಯನ್ನು ಸ್ವಲ್ಪ ತೀವ್ರವಾಗಿಸಬೇಕಷ್ಟೇ , ಜಗತ್ತಿನ ಪ್ರತಿ ಶೃಷ್ಟಿಗು ಪಕ್ಷಪಾತರಹಿತವಾದ ಬಾಳ್ವೆಗೆ ಅವಕಾಶವಿದೆ ಎಂಬುದ ತಿಳಿದು ,ಪರಿಸರದ ಕುರಿತು ಒಂದಷ್ಟು ಜಾಗೃತಭಾವ,ಸರ್ವರಿಗೂ ಸಮಬಾಳು –ಸರ್ವರಿಗೂ ಸಮಪಾಲು ಎಂಬ ಚಿಂತಾಕ್ರಾಂತಿ ಇದ್ದರಷ್ಟೇ ಸಾಕು ಇಂದು ಚಾಲನೆಯಲ್ಲಿರುವ ಬಹುತೇಕ ಕಿವುಡು ಸಮಸ್ಯೆಗಳು ಬಗೆಹರಿದಂತೆಯೇ !
ಜಿ ಎಸ್ ಶಿವರುದ್ರಪ್ಪನವರ ಚಂದದ ಸಾಲುಗಳು ,

ಅದೂ ಬೇಕು ಇದೂ ಬೇಕು ,ದಾರಿ ನೂರಾರಿವೆ ಬೆಳಕಿನರಮನೆಗೆ!
ನೂರಾರು ಭಾವದ ಭಾವಿ ,ತೋಡಿಕೊ ನಿನಗೆ ಬೇಕಾದಷ್ಟು ಸಿಹಿನೀರು
ಪಾತ್ರೆಯಾಕಾರಗಳ ಕುರಿತು ಜಗಳವೇಕೆ !

ನಮ್ಮಿಂದ ಸಮಾಜದ ನಿರ್ಮಾಣ ಎಂಬ ಸಣ್ಣ ಸತ್ಯ ಪ್ರಜ್ಞಾವಂತ ಯುವಜನಾಂಗದ ಪೂರ್ವಸಿದ್ಧ ಆಲೋಚನೆಯಾಗಬೇಕು . ಜವಾಬ್ದಾರಿಗಳಲ್ಲಿ ಅತಿ ಶ್ರೇಷ್ಠವಾದದ್ದೆಂದರೆ ಶಿಕ್ಷಣ ಧರ್ಮವೆಂಬುದ ಅರಿತು ,ತಮಗೆ ತಿಳಿದದ್ದನು ಸಮಾಜಕ್ಕೆ ಧಾರೆ ಎರೆಯುವುದೇ ಯುವಜನಾಂಗದ ಮುಖ್ಯ ಕರ್ತವ್ಯವಾಗಬೇಕು .ಉಪನಿಷತ್ತಿನ ಪ್ರಕಾರ ‘ಪತಿತಂ ,ಪತಂತಂ ,ಪತಶ್ಯಂತಂ,ಉದ್ಧರೇತ್ ಧರ್ಮಃ ‘ಅಂದರೆ ಬಿದ್ದಿರುವವನು ,ಬೀಳುತ್ತಿರುವವನು,ಮುಂದೆ ಬೀಳಲಿರುವವನು ,ಇವರನ್ನು ಉದ್ಧಾರ ಮಾಡುವುದೇ ಧರ್ಮ . ಜಾಗೃತ ಮನಸುಳ್ಳ ,ಸುಉದ್ದೇಶಕ್ಕೆಂದು ಹೊರಟ ಯುವಜನಾಂಗಕ್ಕೆ ಮಹಾಕವಿಯು  ಕವಿವಾಣಿಯನ್ನೇ ಹಾಡಿದರು ,


ನಡೆಮುಂದೆ ನಡೆಮುಂದೆ          

ನುಗ್ಗಿನಡೆ ಮುಂದೆ

ಜಗ್ಗದೆಯೇ ಕುಗ್ಗದೆಯೇ

ಹಿಗ್ಗಿನಡೆ ಮುಂದೆ.. 


ಸಮಾಜಸೇವೆ ,ಸಾಮಾಜಿಕ ಕಳಕಳಿಗಳಂತಹ ಜವಾಬ್ದಾರಿಗಳನ್ನು ಹೊರ ಬಯಸುವವನಿಗೆ ಮೊದಲು ಆತ್ಮವಿಶ್ಲೇಷಣೆ ಬೇಕು ,ಯುವ ಪ್ರತಿಭೆಗಳಿಗೆ ಮೊದಲು ತಮ್ಮ ತಮ್ಮ ಅವಶ್ಯಕತೆಗಳ ಅರಿವಿರಬೇಕು ,ಮುಂದಾಳತ್ವದ ಮುನ್ನೋಟವಿರುವವನಿಗೆ ತನ್ನ ಅವಶ್ಯಕತೆಗಳ ಅರಿವಿಲ್ಲದಿದ್ದರೆ ಹೇಗೆ ?necessity is the mother of invention ‘ಅವಶ್ಯಕತೆಯೇ  ಅನ್ವೇಷಣೆಯ ತಾಯಿ ‘.

ಶಿಕ್ಷಣ ಜೀವನದ ಗುರಿಯಲ್ಲಾ ದಾರಿಯಾಗಬೇಕು ,’ಜ್ಞಾನಕ್ಕಾಗಿ ಜ್ಞಾನ’ ಎನ್ನುವುದು ವ್ಯಕ್ತಿಗುಣವಾಗಬೇಕು ,’ಜೀವನಕ್ಕಾಗಿ ಶಿಕ್ಷಣವಲ್ಲ ಜೀವನದ ಮುಖಾಂತರ ಶಿಕ್ಷಣ’ ಎಂತಾದಾಗಷ್ಟೇ ಶಿಕ್ಷಣದ ವಿಶಾಲಾರ್ಥ ತಿಳಿದು ಕಲಿತಿರುವುದು\ಕಲಿಯುತ್ತಿರುವ ವಿದ್ಯೆ ಬದುಕಿಗೆ ಪೂರಕವಾಗಬಹುದು !






ಭಾನುವಾರ, ಜನವರಿ 8, 2012

ಬದಲಾದ ಜಗದೊಟ್ಟಿಗೆ ಹದಗೆಟ್ಟಿದ ಬದುಕು..

(ನನ್ನ ಮೊದಲ ಲೇಖನ)

 ಜಗದ  ಪ್ರತಿ  ಸೃಷ್ಟಿಗೂ ತನ್ನದೇ ಆದ ಕೆಲ ಕಟ್ಟುಪಾಡುಗಳಿವೆ. ಹರಿಯೋ ಝರಿ,ಹಾರೋ ಹಕ್ಕಿ ,ಸೊಂಪಾಗಿ ಹೂ ಬಿರಿದು ನಗೋ  ಬಳ್ಳಿ ಮೇಲ್ನೋಟಕ್ಕೆ ನಮಗೆ ಹಾಯಾಗಿ ಕಂಡರೂ , ಅವರ ಚಿಂತೆಯ  ಬಳುವಳಿಯ  ಬುತ್ತಿಯನ್ನು ಬಿಚ್ಚಿಡಲು ಯಾರಿಗೆ ಸಾಧ್ಯ ! ಆದರೂ  ಅವರಿಗೆ ಯಾರ ಹಂಗೂ  ಬೇಕಿಲ್ಲ,ಸೃಷ್ಟಿಯು ಇವರಿಗೊಡ್ಡಿರುವ ಆದಿ ಅಂತ್ಯಗಳಷ್ಟೇ ಲಗಾಮು .
ಆದರೆ ಯಾಕೋ ಮನುಕುಲ ಇವೆಲ್ಲಕಿಂತ ತೀರ ತುಚ್ಹ  ಮಟ್ಟದ ಪರಿಸ್ಥಿತಿಗೆ ಬಂದಿಳಿದಿದೆ .ತಾಯಿಯೇ ಮೊದಲ ಗುರು ಎಂದು ಕೇಳಿದ್ದಿವಿ ,ಆದರೆ ಇಂದಿನ ಸಮಾಜದಲ್ಲಿ ತಾಯಿಯರು  ಕೂಡ  modern ಆಗಿ ಬದಲಾಗಿದ್ದಾರೆ !ಮಗು ಮಾತು ಕಲಿಯಲು ಆರಂಭಿಸಿತೆಂದರೆ ಸಾಕು A B C D ಯನ್ನು Z  ವರೆಗೆ ಕಲಿಸಿ,ಶಾಲೆಗೆ ದಬ್ಬುತ್ತಾರೆ.ಇಲ್ಲಿಂದ ಪ್ರಾರಂಭವಾಗುತ್ತೆ ಸುಧೀರ್ಘವಾದ 18 ವರ್ಷಗಳ ಕಾರಾಗೃಹವಾಸ .ಮುಕ್ತವಾಗಿ ಹಚ್ಚ ಹಸುರಿನ ಕಾಡಿನ ಮಧ್ಯೆ ಯಾರ  ಹಿಡಿತವಿಲ್ಲದೆ ಜಿಗಿಯಬೇಕಿರುವ ಜಿಂಕೆಗೆ ,ತುಂಬು ಕೊಠಡಿಯಲ್ಲಿ  ಹಾಕಿ,ಹೀಗೆ ಸಾಗು ಎಂದು ಹೇಳಿದಂತಿರುತ್ತದೆ ಈ ವಿದ್ಯಾರ್ಥಿ  ಜೀವನ.ಇದು ಇಲ್ಲಿಗೆ ಸೀಮಿತವೆ ?ಒಮ್ಮೆ ಲಗಾಮು ಹಾಕಿದ ಕುದುರೆ,ಪಂಜರಕ್ಕೊಡಿದ ಹಕ್ಕಿಯು  ಸ್ವತಂತ್ರ ಬದುಕು ಸಾಗಿಸಲು ಸಾದ್ಯವೇ ?

         ನೀವು ಗಮನಿಸಿರಬಹುದು,ಇಂಜಿನಿಯರಿಂಗ್ ಫಲಿತಾಂಶ ಹೊರ ಬಿದ್ದಾಗ ಹತ್ತಾರು ವಿದ್ಯಾರ್ಥಿಗಳು ಅತ್ಮಹತ್ಯೆಗೆ ಶರಣಾಗುವುದು ,ಈ ಮಧ್ಯೆ ತೀರ ಸಾಮಾನ್ಯವಾದ ಸುದ್ದಿ.ಆದರೆ ಸಮಾಜದ ಮಟ್ಟಿಗೆ ಇವರೆಲ್ಲ ಹೇಡಿಗಳು.ಬದುಕಿನ ತೀರ ಸಣ್ಣದಾದ ಪರೀಕ್ಷೆ ಹಾಗು ಮುಂದೆ ದೊಡ್ಡ ಪರ್ವತದಂತೆ ಬರಲಿರುವ ಪರೀಕ್ಷೆಗಳನ್ನು face  ಮಾಡಲಾಗದಿರುವ ಮುರ್ಖರು! ಹೌದು,ಈ ಮಾತು ಸರಿಯೆ,ಎಂದು ಪ್ರತಿಪಾದಿಸುವವರಿಗೆ,ನನ್ನ ಕೆಲವು ಪ್ರಶ್ನೆ. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳ ಮಾನಸಿಕ ಖಿನ್ನತೆಯ ಬಗ್ಗೆ  ನಿಮಗೆ ಅರಿವಿದೆಯೆ?ಯಾವುದೊ ಒಂದೆರಡು ವಿಷಯಗಳಲ್ಲಿ  ಫೇಲ್  ಆಗಿಬಿಟ್ಟರೆ ಹುಟ್ಟಿರುವುದೇ ದಂಡ ಎಂದು ಟೀಕಿಸುವ ಈ ಸಮಾಜದ ದೃಷ್ಟಿಕೋನವನ್ನು ಸಮರ್ಥಿಸಿಕೊಂಡು ಹೋಗುವಷ್ಟು ಬಲಿಷ್ಠ  ಮನೋಭಾವ  ಆ ಎಳೆ ಮನಸಿಗೆ ಇರಲು ಸಾಧ್ಯವೆ? ಇಂಥ ಎಷ್ಟೊ ಪರೀಕ್ಷೆಗಳನ್ನು ಎದುರಿಸಲು,ಅವರಿಗೆ ದೀರ್ಘವಾದ  ಬುನಾದಿಯ ಅಗತ್ಯವಿದೆ ಅಲ್ಲವೇ!
           ಇಂತಹ ಆಸಕ್ತಿ ಇಲ್ಲದ ಬದುಕಿಗೆ ಗುಡ್ ಬೈ  ಹೇಳಿ ಸ್ವಚ್ಚಂದವಾದ  ನೀಲಿ ಬಾನಿಗೆ ರೆಕ್ಕೆ ಒಡ್ಡಿ ಹಾರುವಷ್ಟು ಮುಕ್ತ ಸ್ವತಂತ್ರ ಬೇಕಿದೆ! ನಿಂತಲ್ಲೆ  ನಿಂತು,ಸಮಾಜದ ಕಟ್ಟುಪಾಡೆಂಬ ಕೊಳೆತ ಕೊಳದಿಂದ ಹೊರ ಬಂದು ಹರಿಯೋ ಝರಿಯಾಗುವಷ್ಟು ಸ್ವತಂತ್ರ ಬೇಕಿದೆ ! ಮುಚ್ಚು ಮರೆ ಇಲ್ಲದೆ,ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುವ ಹೂವಿನಂತಹ  ಮುಗ್ಧವಾದ ಸ್ವಾತಂತ್ರ್ಯ ಬೇಕಿದೆ!
 ಇವೆಲ್ಲ ಸಾದ್ಯವಾಗಬೇಕೆಂದರೆ, ಮನೆಯೇ  ಮೊದಲ ಪಾಠಶಾಲೆಯಾಗಬೇಕು .ಶಿಕ್ಷಣ ಇರುವುದೆ ಮುಂದೊಂದು ದಿನ ಓದಿ ಹಣ ಗಳಿಸುವುದಕ್ಕೆ ಎಂದು ಹುರಿದುಂಬಿಸುತ್ತಿರುವ ಸಮಾಜದ ಹುಚ್ಹು ಹೊಳೆಗೆ ಕಡಿವಾಣ  ಬೀಳಬೇಕು.ಕಲೆ , ಸಾಹಿತ್ಯ ,ಕ್ರೀಡೆ ಎಂಥ ವಿಷಯದಲ್ಲಿ ಆಸಕ್ತಿ ಬೆಳೆಯಬೇಕು .ಬಾವಿ  ಕಪ್ಪೆಗಳಂತೆ ಇರುವುದನ್ನು ಬಿಟ್ಟು,ಪರಿಸರದ ಚಿಕ್ಕ-ಪುಟ್ಟ, ಸೋಲು ಗೆಲುವುಗಳನ್ನು ,ಸೂಕ್ಶ್ಮವಾಗಿ  ಗ್ರಹಿಸಿ ಪಾಠ ಕಲಿತು, ಮಾನವೀಯತೆ ಮೆರೆವ  ಬದುಕನ್ನು ಆರಂಭಿಸಬೇಕಿದೆ !
ಶಿಕ್ಷಣವಷ್ಟೇ ಅಲ್ಲ ,ನಾವು ಯೋಚಿಸುತ್ತಿರುವ ರೀತಿ,ಮಾತು, ನಡವಳಿಕೆ ಇವೆಲ್ಲದರಲ್ಲಿ  ರೂಪಾಂತರದ  ಅಗತ್ಯವಿದೆ ಅಲ್ಲವೆ? ಏನಂತೀರ?

ಗುರುವಾರ, ಜನವರಿ 5, 2012

ನಾ ಕಂಡ ಹಾಗೆ..


 ನಾ ಕಂಡ ಹಾಗೆ ನಮ್ಮೆಲ್ಲರ ಪೋಷಕರಲ್ಲಿ ಅದೊಂದು ಹುಚ್ಚು ಹಂಬಲ ನಿರಂತರವಾಗಿ ಪುಟಿಯುತ್ತಿರುತ್ತದೆ .ತಮ್ಮ ಎಲ್ಲಾ ಆಸೆಗಳಿಗು ಪರದೆ ಎಳೆದು ,ಮಕ್ಕಳ ಚಿಗುರಿನಂತಹ ಕನಸುಗಳಿಗೆ ಸಿಬಿರಿನಂತೆಹೆ ಕಾವಲಾಗುವುದೊಂದೆ ಇವರ ಜೀವನದ ಮುಖ್ಯ ಉದ್ದೇಶವಾಗಿ ಉಳಿದುಬಿಡುತ್ತದೆ.ಯಾವೊಂದು ಗಳಿಗೆಯಲ್ಲೂ ತಾವು ಅನುಭವಿಸಿದ ಅದಾವ ಕಷ್ಟ ಪರಿಸ್ಥಿತಿಗೂ ತಮ್ಮ- ತಮ್ಮ ಮಕ್ಕಳು ಸಿಲುಕ ಬಾರದೆಂದು ಹಂಬಲಿಸಿ,ಇದನ್ನೇ ಗುರಿಯಾಗಿ ಸ್ವಿಕರಿಸಿಬಿಡುತ್ತಾರೆ.

ಆದರೆ ನನಗ್ಯಕೋ ಈ ಮದ್ಯೆ ಇವಾವ ಹಂಬಲಗಳು ದೊಡ್ಡ ಗುರಿಯಂತೆ ತೋರುತ್ತಲೇ ಇಲ್ಲ!

ಕೆಲ ಕ್ಷಣ ನಿಮ್ಮ ಮನಸ್ಸನ್ನು ಚಿಂತೆಗೆ ದೂಡಿ ಸ್ನೇಹಿತರೆ , ನಮ್ಮ ಪೋಷಕರು ನಮ್ಮೆಡೆಗೆ ತೋರುವ ಆಸಕ್ತಿ ,ಮುಂದೆಯೂ ನಿರಂತರವಾಗಿ ತೋರಬಹುದಾದ ಆ ಒಲವು ಬರಿ ನಮಗಷ್ಟೆ ಏಕೆ ಸೀಮಿತವಾಗಿರ ಬೇಕು?

ಇವರು ತೋರುವ ಆ 100% ಪ್ರೀತಿಯಲ್ಲಿ ಅದೆಷ್ಟೋ ಅನಾಥ ,ABNORMAL ಮಕ್ಕಳಿಗೆ ಒಂದು ಪಾಲು ಕೊಡಲು ನಿರ್ಧರಿಸಿದ್ದರೆ,ಅದೊಂದು ಎತ್ತರದ ಚಿಂತನೆಗೆ ವೇದಿಕೆ ಸಿದ್ದಪಡಿಸಿದಂತಾಗುತಿತ್ತು ,ಅಲ್ಲವೇ?

ಇದನ್ನೇ ಅಲ್ಲವ "broad minded thinking" ಅನ್ನೋದು ?

ಇಂತಹ ಅಸಾಧಾರಣ ತಿಳಿವಳಿಕೆಯೊಂದು ಮೂರ್ಖತನದ ಮುಸುಕಿನೊಳಗಿಂದ ಕೆಲಸ ಮಾಡಿದಾಗಲೇ ಅಲ್ಲವೆ ಒಂದಷ್ಟು ಬುದ್ದಿಜೀವಿಗಳ ವ್ಯಕ್ತಿತ್ವ Elevate ಆಗೋದು! ಏನಂತೀರ?