ಸೋಮವಾರ, ಜುಲೈ 9, 2012

ಮನಸ್ವಿಯ ಮಾತು..

ದೂಡಿ ಇವನತ್ತ ನನ್ನನಾಗಸಕ್ಕೆ
ಕಾದು ಕೂರೆ ನಿಶ್ಚಲ ನೀಲ ಕನ್ಯೆಯೇ
ಬಂದು ಹೇಳುವುದಿದೆ ಬಿಡಿಸಿ ನಿನಗೆ
ನಾ ಕಂಡ ಹೊನ್ನ ಪಲ್ಲಕ್ಕಿಯ ತೇರು ಇವನ ಕಣ್ಣಿನೊಳಗೆ

ಮಾತಿಗಿಳಿದು ವಿನಯ ಮೀರಿ ನಿಟ್ಟಿಸುತಿರೆ ನಯನ

ನಿಷಿದ್ಧ ನಿಶೆಯಲೇ ಬಿಡಿ ಮುತ್ತ ಒತ್ತಿಡುವಾಸೆ
ತಿರುಗಿ ಗೀಚೆ ಕದಲುವನೇನೋ ,ನಿಜ ಒಲುಮೆಯಲಿ
ಕೆನ್ನೆ ತುಂಬಾ ಕೆಂಬಣ್ಣ
ಈ ..
ಚೆಂದ ಬಣ್ಣಗಾರ !

ಇದೆಂಥಾ ಹಬ್ಬವೋ ಮನಸ್ವಿಯಂತಿದ್ದ ನನ್ನಲಿ
ಮನ್ವಂತರದ ರಂಗು ರಂಗೋಲಿ ಮೈಯಲಿ
ಚಿಗುರೆಲೆ ತೋರಣ ಕಿರು ದೀಪ ಕೈಹಿಡಿದ ಸಂಭ್ರಮದಿ
ಇಗೋ ತಂದಿಹೆನು ಬೊಗಸೆ ಮಲ್ಲಿಗೆ ಇಬ್ಬನಿ ಗಂಧ ಉಡುಗೊರೆಯಲಿ

ಬಟ್ಟೆ ತುಂಬಾ ಚಿಟ್ಟೆ ರಾಶಿ
ನಲಿವ ಬಣ್ಣಿಸ ಬೇಕೆ ?
ಹನಿಗವನ ಮಹಾಕಾವ್ಯವೇ ಆದೀತು
ದೂಡಿ ಇವನತ್ತ ನನ್ನನಾಗಸಕ್ಕೆ
ಕಾದು ಕೂರೆ ಕೃಷ್ಣ ಕನ್ಯೆಯೇ
ಬಂದು ಹೇಳುವುದಿದೆ ಬಿಡಿಸೆಲ್ಲವ ನಿನಗೆ
ಮನ್ಮಥನಾಡಿದ ಮಂಥನ ಮಾಯೆ !



ಬುಧವಾರ, ಜೂನ್ 27, 2012

ರೆಪ್ಪೆ -ರೆಕ್ಕೆ..


ರೆಪ್ಪೆ ಕಿತ್ತು ರೆಕ್ಕೆಗಂಟಿಸಿ ಹಾರಿಸಿದ್ದೆ ಕನಸೊಂದನು
ಕಣ್ಣಮುಂದೆಯೇ ಧರೆಗುರುಳಿ ನರಳುತಿದೆ ಇಂದು
ಏನಾಗದಂತೆ ನಟಿಸಬೇಕೆ ಈ ಹೊತ್ತಿನಲು ನಾ ನೇಪಥ್ಯದಲಿ ಕೂತು

ಹೇಳಲಾಗದೆ ಹಪಾಪಿಸುತಿರುವೆ ,ಅದಾವ ಕಾಲದ ಪಾಪವೋ ನನದು
ಬೊಬ್ಬೆ ಕಂಗಳ ರಕ್ತ ನರವು ಗಿಹಿಗಿಹಿ ನಗುತಿದೆ
ನಿನ್ನೆದೆಯ ತಳಮಳಕೆ ನೀನೆ ಹೊಣೆ ಎಂದು

ಕೈ ಕಿವುಚಿ ಕಾಲ ಹೊಸೆಯುತ್ತಾ ನೋವು ನುಂಗುವುದಷ್ಟೇ
ನನ್ನ ಪಾಲಿನ ಮೃಷ್ಟಾನ್ನವು
ತಿಂದು ತೇಗಿ ಮತ್ತೆ ನಾಳೆಗಳ ಕೂಡಿಸಿಕೊಂಡು ಹಾರಬೇಕು
ಇದೇ ನನ್ನ ಬಾಳ ಸಂಸ್ಕೃತಿಯು

ಪ್ರಾಸಕ್ಕೆಟುಕದ ಕವಿತೆ ನನ್ನದು
ತಿಳಿದಷ್ಟನ್ನೇ ಗ್ರಹಿಸಿ ಮುಂದೆ ಸಾಗಿ
ಭಾವುಕತೆಗೆ ಪ್ರಶ್ನೋತ್ತರ ಬೇಡ ದಯವಿಟ್ಟು.  




ಶನಿವಾರ, ಮೇ 12, 2012

ನಿಶೆಯೊಡಲಿನಲಿ..

ಹೊದ್ದೇನ ಮಲಗಲಿಂದು,
ಹನಿ ಬಿದ್ದು ಹೂ ಎದ್ದು ಕುಣಿಯುತಿರೆ ಮೋಜಿನಲಿ
ಕಾಫಿಗತ್ತಲ ಕರಸ್ಪರ್ಶದ ಕನಸು ವಿಫಲವಾಗುತಿಹುದು
ವೇಣಿ ಗಾಳಿಯ ಏಕಾಂತದಲಿ

ಕದ್ದೇನ ತರಲಿಂದು,
ಕಾರ್ಮೋಡದ ಕಿರು ದಾರಿ ಕತ್ತಲಿನಲಿ ನಿನಗಾಗಿ
ಒಂಟಿ ತಾರೆ ದೀಪ ಹಿಡಿದು ಬಂದರಷ್ಟೇ ಸಾಕಲ್ಲವೆ
ಭೂಮಂಡಲ ಬಳಸಿ ಬರುವ ನಿಶೆಯೊಡಲಿನಲಿ

ಭ್ರಮಿಸುವಷ್ಟು ಸೆಳೆಯುವ ತೊಳಾಸರೆಯೊಂದಿದೆ
ಬಳಿಹೋಗುವಮುನ್ನ ಅದ್ಯಾಕೋ ನಾಚಿಕೆ ಮೈಯ ತಬ್ಬಿ ನಿಂತಿದೆ
ಒಂದೆರಡು ಮುತ್ತ ಒತ್ತಿ ಕೊಟ್ಟರೆ ದೂರ ಸರಿಯುವುದೇನೊ
ಪ್ರಶ್ನೆಗುತ್ತರ 'ತಿದ್ದಿ ಬರೆದ ತಪ್ಪಿನೊಳಗಿದೆ ' 

ತೊಟ್ಟಿಕ್ಕುವ ಎಲೆ ಎದೆಹನಿಯ ಮುಡಿಗಿಟ್ಟು ಬರುವೆನಾಗ
ಮುಂಗುರುಳಿನ ಬೆರಳ ಜೋಗುಳದ ಸೋಗಿನಲಿ
ಹಸಿಯುಸಿರ ಬಿಗಿಯಪ್ಪುಗೆಗಳಲಿ ನಿನ್ನ
ಪಿಸುಮಾತಲ್ಲುಸುರುವ ಶಾಖ ಹೊದ್ದು ಮಲಗುವೆನಾನಗ..  


ಶುಕ್ರವಾರ, ಏಪ್ರಿಲ್ 13, 2012

ಅದೆಂಥ ದಿನಗಳವು..

ಮತ್ತೆ ಹಾರುವ ಧೈರ್ಯ ಮಾಡಲೇನ ಸಣ್ಣಗೆ
ಕೊಕ್ಕಿನೊಳು ಸಿಕ್ಕಿಬಿದ್ದ ಜೀವದಂತೆ
ದುಃಖ ಉಮ್ಮಳಿಸಿ ಬಂದರೆ ಹಿಂದಿನಂತೆ?

ಅದೆಂಥ ದಿನಗಳವು
ಜಿಗಿದಾಡುತಿತ್ತು ಮನ ಜಗದಗಲವು ಸ್ವಚ್ಛ ಸ್ವಪ್ನ ಸೀಮೆಯಲಿ,ಮೀರಿಸುವ
ಎದೆಬಡಿತವಿತ್ತು ಗಾಳಿಯೊಂದಿಗೆ ಪೈಪೋಟಿಯೊಳು
ಮರೆಯಾಗಿಯೇ ಹೋದವು ;ಅದೆಂಥ ದಿನಗಳವು
  

ರಾಶಿ ಬೀಜ ಉದುಕಿ ತಂದು ,ಕಂಗಳ
ಹೊಲದಲೊಬ್ಬಳೇ ಬಿತ್ತಿ ನಲಿದಿದ್ದೆನು
ಈಗ ಪಟಪಟಿಸುವ ರೆಪ್ಪೆ ಮೊಳೆತ ಚೂಪು
ತಾಗಿ ಇರಿಯುತಿರೆ ಅಭಿಮಾನದಲಿ ಶುಭ ಹೇಳ ಹೋಗಲೇನು ?

ಬಾನು ಬಣ್ಣ ಗೊಂದಲದಲಿ ನಕ್ಕು ನಲಿದಿದ್ದೆನು
ಪಾರಿಜಾತ ಗಿರಿಯ ಹಾರ ಹಿಡಿದು ಕಾದಿದ್ದೆನು
ಈಗ ಮುಗಿಲ ಕದದಲಿ ನಗುತಿಹುದು ಗೇಲಿ ಬೀಗ
ನಾನೀಗ ಶೃತಿಹಿಡಿದ ಮೌನರಾಗ !

ಶನಿವಾರ, ಮಾರ್ಚ್ 17, 2012

ಭಯ ಭಾವ..

ನಾ ಅದೆಂದೋ ರೂಪಿಸಿದ್ದ ಅಂತರವಿಂದು
ರೂಪಾಂತರಗೊಂಡಿದೆ
ವಸಂತನ ತೆರೆಯಂಚಿನಾಕರ್ಷಣೆ
ಜಡೆಹರಡಿದ ಬೆನ್ನ ಸವರಿದಂತಿದೆ

ನೀನು ಸುರಿಸಿದಷ್ಟನ್ನೂ ಹೀರಿ ಸವಿದು
ಅತೃಪ್ತಳಾಗೆ ಉಳಿಯುವಾಸೆ
 ಆದರೆ
ಕೊಂಚ ಮುಗ್ಧವೆನಿಸುವಷ್ಟು ಸಲುಗೆ
ಸೋಕಿದೊಡನೆ ಗರಿಗೆದರುವಾಸೆ ನೀಲಾಗಾಧದಂತಿದೆ..

ಕತ್ತಲೆದೆಯ ಬಯಲಿನಲ್ಲಿ ನೊರೆಹಾಲು ಬಿಳಿಯ
ಮಂದಹಾಸದಾಮಂಜು ನೀನು ಮಳೆ ಮಾನವ
ಮುದ್ದೆ ಮೋಡದ ಹಿಂದೆ ಅವಿತಿರುವ ಧೀರನೆ
ಧರೆಗಿಳಿದು ‘ಧೋ’ ಕರಿಯುವುದಕೇಕೋ ಮುಜುಗರದಾಟ!

ಚಂದದಲ್ಲಿ ಸ್ಥಿರನು ನೀನು
ಸ್ಥಿರತೆಯಲ್ಲಿ ನಿನ್ನ ಮೀರಿಸಬಲ್ಲೆ ನಾನು
ತೆರೆದಿಟ್ಟ ನನ್ನೆಲ್ಲ ಸಾವಿರೆದೆಯ ಕಣ್ಣಿಗೆ,ನಿನ್ನ ಸೃಷ್ಟಿಯ  
ತಂಪು ವಾತಾವರಣದ ಹಿತವಿದ್ದರಷ್ಟೇ ಸಾಕು..

ಬರುವಿಕೆಯನ್ನೇ ಬಾಯ ಬಿಟ್ಟು ಕಾಯುವ ಹೂವಲ್ಲ ನಾನು
ನಿರೀಕ್ಷೆಯಲ್ಲಿ ಬಿರುಕುಬಿಟ್ಟ ಒಡಲ ಭೂವನಿತೆಯಲ್ಲಾ ನಾನು
ಇದ್ದರಾ ಗುಡ್ಡದೆತ್ತರದ ನಿರಾಸಕ್ತಿಯು
ಬಂದಾಗೆಲ್ಲಾ ಥಳಥಳಿಸಿ ನಗಲುಬಲ್ಲ ನಗೆನವಿಲು ನಾನು

ಕಾಲಕುಂಚ ನದಿಹಾಳೆಗೆ ಗೀಚಿದ
ವಿಧಿಯಗೆಲ್ಲಿಯ ನಾವು ಬಯಸುವಾ ತುದಿ
ಈ ಮಿಂಚಿನಾಟಕಂಜಿ ದಿಗ್ಗನೆ ಪಂಚೇಂದ್ರಿಯ
ಕೆದರಿ ನಾ ಓಡುವೆ ಆ ಹೆಪ್ಪು ಬಯಲಿನಲಿ..

ಅದ್ಯಾಕೊ ಮಳೆ ಧರೆಗಿಳಿಯುವ ಮೊದಲೇ ಘನ
ಭಾವ ಬಿಂದು ಇಂಗುವ  ಭಯ ಭಾವ ಮುಡಿಗೇರಿದೆ

ಏನೇ ಇರಲಿ ,
ಅದೆಂದೋ ರೂಪಿಸಿದ್ದ ಅಂತರವಿಂದು
ಪೂರ್ಣಪ್ರಮಾಣದಲ್ಲಿ ರೂಪಾಂತರಗೊಂಡಿದೆ
ವಸಂತನ ತೆರೆಯಂಚಿನಾಕರ್ಷಣೆ
ಜಡೆಹರಡಿದ ಬೆನ್ನ ಸವರಿದಂತಿದೆ ..

ಗುರುವಾರ, ಫೆಬ್ರವರಿ 16, 2012

ಧುಮ್ಮಿಕ್ಕಿ ಹರಿದಿದೆ..

ಮತ್ತದೇ ತೊರೆ ಧಮನಿಯೊಳಗಿಳಿದು ಧುಮ್ಮಿಕ್ಕಿ ಹರಿದಿದೆ
ಮಂದ ಬೆಳಕಿನ ಈ ತಿಳಿ ನೆರಳು 
ಬೆಟ್ಟದೆತ್ತರದ ಖುಷಿಯ ಬಾಚಿ ಮಡಿಲ ತುಂಬಿದಂತಿದೆ..
ಬೆಳಗಿಬ್ಬನಿ ದೂರದಿಂದ ಮೆಟ್ಟಲಿಳಿದು ಬರುತಿದೆ
ಪಾರದರ್ಶಕ ಮೊಗದ ತುಂಬಾ ನಿರ್ಲಿಪ್ತತೆಯ ಗುಲ್ಲೆಬ್ಬಿದೆ
ದಿನಗಳಿಂದ ಸೊರಗಿದ್ದ ನಗು ಕ್ಷಣದಲ್ಲೇ ರಾಶಿ ರಾಶಿ ಉಲ್ಬಣಿಸಿದಂತಿದೆ..

ಆಚೆ ದಿಗಂತದ ತುದಿಗಿದ್ದ ಮೌನ ಧರೆಗಿಳಿದು
ನನ್ನೊಳಗಿನಿ ಭಾವ ಕುಸುಮದಾ ಪುಷ್ಟಿಗೆ
ಮಧುವ ಎರೆಯಲು ಮಂದಹಾಸದಿ ನಿಂತಂತಿದೆ

ಮತ್ತದೇ ಸಿಹಿ ನೀರ ತೊರೆ ಧಮನಿಯೊಳಗಿಳಿದು ಧುಮ್ಮಿಕ್ಕಿ ಹರಿದಿದೆ
ಬೆಟ್ಟದೆತ್ತರದ ಖುಷಿಯ ಬಾಚಿ ಮಡಿಲ ತುಂಬಿದಂತಿದೆ..

ಶನಿವಾರ, ಫೆಬ್ರವರಿ 4, 2012


 ನಾಲ್ಕು ದಿನದ ಹಿಂದಿ ಕಾರಣಾಂತರಗಳಿಂದ ಕ್ಲಾಸಿನ ಹುಡುಗನೊಬ್ಬ ತೀರಿಕೊಂಡ,ಸುದ್ದಿ ಕಾಲೇಜಿನ ತುಂಬಾ ಹಬ್ಬಿ ನಿಂತಿತ್ತು .ವಿಸ್ತರಿಸಿ ಹೇಳಬೇಕಾದರೆ ಹುಡುಗನೊಬ್ಬ ನೊಂದು ರೈಲಿನ ಕಾಲಡಿಯಲ್ಲಿ ತಲೆಕೊಟ್ಟು  ದೇಹವ ಕಸದಂತೆ ಅನಾಥವಾಗಿ ‘ಶಿರವಿರದ ಶವ’ವೆಂಬ ಪರಿಸ್ತಿಯಲ್ಲಿ ಬಿಟ್ಟು ಹೋಗಿದ್ದನು .
ನನ್ನ ಭಾವೋದ್ವೇಗ ಆತ ಸತ್ತಿದಕ್ಕೋ ಅಥವ ಅವನ ಸಾವಿನ ಸುತ್ತ ಸೆರೆನಿಂತಿದ್ದ ಕಾರಣಗಳ ಕುರಿತಾದದ್ದೋ ಅಲ್ಲಾ,ನಿನ್ನೆಯಷ್ಟೇ ನೋಡಿದ್ದ ವ್ಯಕ್ತಿಯ ಸಾವಿನ ಸುದ್ದಿ ತಿಳಿದ ನಾನು ಪ್ರತಿಕ್ರಯಿಸಿದ ಅನಾಚಾರದ ರೀತಿ ಮತ್ತು ನೀತಿಭ್ರಷ್ಟತೆಯ ಕುರಿತಾಗಿ.
ಕಾರಣ ನೂರಾರಿದೆ ,
  • since i was one among the crowd i couldn’t respond.
  • ಯಾರೋ ಹೊರ ರಾಜ್ಯದ ಹುಡುಗ, ನಾನು ಆತನ ಸಾವಿಗೆ ಪ್ರತಿಕ್ರಯಿಸೋದು over acting ಅನ್ಸಲ್ವ .
  • ಲೇಟ್ ಆದ್ರೆ Attendence ಕೊಡಲ್ಲ ,ಮತ್ತ ಅಲ್ಲಿ ಪೊಲೀಸ್ಸು,ಪ್ರೆಸ್ಸು ನನ್ನಗ್ಯಾಕೆ ಇದರ ಉಸಾಬರಿ ಎಲ್ಲಾ..!

ಹತ್ತಾರು ಚಿಂತನ ಮಂಥನ ಮೆದುಳ ತುಂಬಾ ಮಂಕು ಎರಚಿತ್ತು.ತುರ್ತು ಪರಿಸ್ತಿತಿಯಲ್ಲಿ to be on the safer side ನಮಗೆ ನಾವೇ  ಕೊಟ್ಟುಕೊಳ್ಳುವ ಸಮಜಾಯಿಷಿ ಮಾತುಗಳಲ್ಲವೇ ಇದು!ನನ್ನ ಹಾಗೆ ಎಲ್ಲರೂ ಬುದ್ದಿ ದೌಡಾಯಿಸಿರ ಬಹುದು,ಹಾಗಾಗಿಯೇ ಏನೋ ಕ್ಲಾಸಿನ ಇಬ್ಬರು ಹುಡುಗರು ಬಿಟ್ಟರೆ ಕಾಲೇಜಿನಿಂದ ಒಬ್ಬ ನರ ಜೀವಿಯು ತಕ್ಷಣಕ್ಕೆ ಸಹಕರಿಸುವುದಿರಲಿ ಸ್ಪಂದಿಸಲೂ ಸೋತಿದ್ದರು.

ಪರಿಸ್ತಿಯ ಗಾಂಭೀರ್ಯತೆಯ ಅರಿವಾಗಿದ್ದರೆ ,ನನ್ನ ಮೂರ್ಖತನದ ಅರಿವೂ ನಿಮಗಾಗಿರುತ್ತೆ .ವಿಪರ್ಯಾಸವೆಂದರೆ ನಮ್ಮನ ನಾವು ಈ ದಿನೇ ಎಷ್ಟರ ಮಟ್ಟಿಗೆ ತಾಂತ್ರಿಕವಾಗಿಸಿದ್ದಿವೆಂದರೆ ,ಎಲ್ಲದಕ್ಕೂ ಯೋಚಿಸುತ್ತೇವೆ.ಕೆಲಸ ಮಾಡುವ ಮುನ್ನ ಅನಾನುಕೂಲ ,ಲಾಭ,ಲೋಪಗಳ ಪಟ್ಟಿ ಮಾಡುತ್ತೇವೆ ..ಯಾರಾದರು ಆಕಾಶ ತೋರಿಸಿ,how beautiful is the sky today ಅಂದ್ರೆ ,yes since it is summer disappearance of clouds are the reason to it ಅನ್ನತ್ತೀವಿ.ನಮ್ಮನ ಎಷ್ಟರ ಮಟ್ಟಿಗೆ ಬದಲಾಯಿಸಿ ಬಿಟ್ಟಿದಾರಂದ್ರೆ “thinking out of the technology is a crime”ಅನ್ನೊ ರೀತಿ ವರ್ತಿಸ್ತೀವಿ .
 
ಕ್ಲಾಸ್ನಲ್ಲಿ ಎಲ್ಲರು ನನ್ನ ಹಾಗೆ ಯೋಚಿಸಿದ್ದ್ರಲ್ಲ ಅನ್ನೊ ತೃಪ್ತಿ ನನ್ನ್ಗಂತೂ ಖಂಡಿತ ಇಲ್ಲ ,ನಾನು ಎಲ್ಲರ ಹಾಗೆ ಯೋಚಿಸೊದನ್ನ ಕಲ್ತ್ಬಿಟ್ಟನಲ್ಲ ಅನ್ನೊ ಸಣ್ಣ ಮರುಗು ಅಂತು ಇದೆ.ಇಷ್ಟಂತೂ ನಿಜ ಮುಂದೆ ನನ್ನ ಸ್ತಿಥ ಪ್ರಜ್ಞೆಯಲ್ಲಿ ಇಂಥ ಅಮಾನವೀಯತೆಯ ದೊಂಬರಾಟ ಖಂಡಿತ ನಡೆಯೋದಿಲ್ಲ ಎಂದು ನಿರ್ಧರಿಸಿದ್ದೇನೆ.


-ಗಗನ  ಮೈತ್ರಿ