ಶುಕ್ರವಾರ, ಸೆಪ್ಟೆಂಬರ್ 5, 2014

ಹಿಡಿಯಲಾದಿತೆ ..

ಹಿಡಿಯಲಾದಿತೆ ಈಗೋ ಈ ಧೋ ಮಳೆಯ
ಹೊತ್ತು ಸುರಿದು ,ಮೈ ಕೆಸರಾಗಿಸಿ
ಕೊಚ್ಚಿ ಹೋಗಲೆಂದೇ ಬಂದ ದಿಗಂಬರನ
ಸೆರೆ ಹಿಡಿಯಲಾದೀತೆ 

ಗುದ್ದಾಡಿ ಒಳ ನುಗ್ಗುವ ಅದೃಷ್ಯ ನೆನಪುಗಳ
ಬಿಚ್ಚಿ ತೋರಿಸಲಾದಿತೆ 
ಆಗೊಮ್ಮೆ ಅಳು,ಈಗೊಮ್ಮೆ ನಗೆ ಎಬ್ಬಿಸಿ
ಅಂತರಾಳಕೆ ಜಾರಿಕೊಳ್ಳುವ ಆ ಗುಪ್ತವನಿತೆಯರ 
ಕರೆ ತಂದು ನಿಲ್ಲಿಸಲಾದೀತೆ 

ಎಲ್ಲರ ಎದೆಯಲ್ಲಿ ಅವರದ್ದೇ ಖಾಸಗಿ ನೆನಪುಗಳ
ಕಿರು ಕಿಟಕಿಗಳು ,ಎಟುಕಲಾರವು ಅವರಿವರ ಕೈಗೆ
ಎಟುಕಿದರು ಏನೈತಿ ಅದರೊಳಗೆ
ತಿದ್ದಿ ತೀಡಿದ ಪರಭಾಷಾ ಗೋಡೆಬರಹಗಳಷ್ಟೇ..


ಸಹಿಸಿಕೊಳ್ಳಿ ..

ಜನರ ಬಲಿಷ್ಠ ನಂಬಿಕೆಗಳ ಬುಡಕ್ಕೆ 
ಕೊಳ್ಳಿ ಇಡಲು ಯತ್ನಿಸುವ ನಾವು 
ಹಿಡಿದ ಅಷ್ಟೂ ದಾರಿಯೂ ಒರಟಾದದ್ದೇ
ದ್ವಂದ್ವಕ್ಕಿಳಿದ ಹುಚ್ಚಾಟವೆನಲ್ಲಾ ಇದು 
ಸರಿ ತಪ್ಪುಗಳ ನಡುವೆ ಇರುವ 
ರೇಷ್ಮೆ ಎಳೆಯ ಅಂತರ ಅತ್ತಿಂದ ಇತ್ತ ,ಇತ್ತಿಂದ ಅತ್ತ 
ಚಲಿಸುತ್ತಾ ಮನಸ್ಸಿಗೆ ಇರಿಯಲಾರಂಭಿಸಿರುತ್ತದೆ 
ಹೋರಾಟದ ಬುಗ್ಗೆ ತಣ್ಣಗಾಗಬೇಕಾದರೆ 
ಕ್ರಾಂತಿಯಾಗಬೇಕು ಇಲ್ಲವೋ ಪ್ರಯೋಗಗಳು ವಿಫಲವಾಗಬೇಕು
ಸ್ವಲ್ಪ ಸಹಿಸಿಕೊಳ್ಳಿ ಸುಂದರ ಮಾನುಷ್ಯರಾಗಲು ಹೊರಟವರು ನಾವು
ಹರಿಸಬೇಕ್ಕಿದ್ದ ಅಷ್ಟೂ ಕಣ್ಣಿರೂ
ಗಳಿಸಬೇಕ್ಕಿದ್ದ ಎಷ್ಟೋ ಕರುಣೆಯನ್ನು
ವಿನಮ್ರವಾಗಿ ಅಲ್ಲಗಳೆದಿದ್ದೇವೆ
ಭಂಡತನವೆನಬೇಡಿ ಈ ವ್ಯಕ್ತಿ ವೈಶಿಷ್ಟ್ಯತೆಯನ್ನು 
ಕರೆದೊಮ್ಮೆ ಎದೆಗಪ್ಪಿ ಕೇಳಿ ನೋಡಿ
ತರಂಗಗಳೇಳಬಹುದು ನಿಮ್ಮ ಅಂತರಂಗದ ತೀರದಲ್ಲೂ..

ಭಾನುವಾರ, ಜೂನ್ 15, 2014

ಕಾಯುತಿರುವೆ..

ಬಯಕೆಗಳನ್ಹೊತ್ತ ಬೆಟ್ಟದಂಚಿನಲಿ ಕೂತು ಕಾಯುತಿರುವೆ 
ಮುಸುಕು ಆಕೃತಿಯ ಮುರಳಿದನಿಕಂಡರೆ
ದ್ವೈತ ಮರೆತು ಐಕೈತೆಯಲಿ ಗಾನಸ್ಪರ್ಶಕಷ್ಟೇ ಸ್ಪಂದಿಸುವಾಸೆಯಾಗಿದೆ!

ಉಫ್.. ಸಮಭಾವವಿದಿದ್ದರೆ ಸಂಜೆಹೊತ್ತಿನಲಿ ಸೆಳೆದೆತ್ತೆತ್ತ ಒಯ್ಯುತಿದ್ದೆನೋ ನಾ ಕಾಣೆ!

ಜುಯ್ ಗಾಳಿಯೊಡನೆ ತೇಲಿ
ಅಪ್ಪುವಾಸೆ ಭೋರ್ಗರೆತದಲಿ ಕೊಚ್ಚಿ ಹೋಗುವ ಮುನ್ನ ಬರಬಾರದೆ
ನಾನಿನ್ನು
ಬಯಕೆಗಳನ್ಹೊತ್ತ ಬೆಟ್ಟದಂಚಿನಲಿ ಕೂತು ಕಾಯುತಿರುವೆ..

ಬಯಕೆ..


ಕತ್ತಲ ಕೂಪದಿಂದೆದ್ದು ಬಂದವನ
ಕ್ರೌರ್ಯ ಮರೆತುಬಿಡು ಎನಬೇಡಿ
ಉಸಿರು ಒಡಲ ಮರೆಯುವುದಾ
ಮರೆತರು ಕೆದಕಿ ಕೇಳುವುದ ನೀವೂ ಮರೆಯುವಿರಾ ?
ತಾಗದಂತೆ
ಬಂದು ಒಡಲ ಸೇರೋ ಓ ಕ್ರೂರಿ
ಮಿಂಚು ಹುಳುವ ಕೂಡಿ ಕತ್ತಲ ಬೆಳಕಿಗೆಳೆಯುವ ಜೊತೆಗೂಡಿ !

ಹಾದರದ ಹಾದಿಯಲಿ ಸರಿದಾಡಿ ಬಂದವಳ
ತಲೆತಗ್ಗಿಸಿ ನಡೆ ಎನಬೇಡಿ
ಕೈ ಮೈಯ ಮೇಲಿನ ಸೆರಗು ಮರೆಯುವುದಾ
ಮರೆತರು ಹೊಲಸ ಉಸುರುವುದ ನೀವೂ ಮರೆಯುವಿರಾ ?
ಗತ್ತಿನಿಂದ
ಕೈಬಿಗಿದು ಓರೆ ಬಾರೆ ಓ ಸಖೀ
ಲೆಕ್ಕಿಸದೆ ಹೂ ದಂಡೇ ಚೆಲ್ಲಿ ಸಾಗುವ ಮೈಲಿಗೆಯ ಹೊಸ್ತಿಲುಗಳಲಿ!

ಗುರುವಾರ, ಸೆಪ್ಟೆಂಬರ್ 13, 2012

ನಾ ದೋಣಿಯಾದೆ ಅಂದಿನಿಂದ..


ನೀಲಿ ಬಾನಿಗಿರದ ಭಾಗ್ಯ
ಒಲಿದು ಬಂತು ನನಗೆ
ಉತ್ಫುಲ್ಲ ತೋಳ ತೆಕ್ಕೆಯಲ್ಲಿ
ನದಿ ಎದೆಯ ಹಾಡ ಕೇಳುವ ಆ ಸುಧೆ
ಸೋಕುವವರೆಗೂ ನಿರ್ಭಾವ

ಸೋಕಿದಂದಿನಿಂದ ಇಬ್ಬರದೊಂದೇ ಭಾವ
ಕಚಗುಳಿ ಅಲೆಅಲೆ ತೋಯ್ದ ಮನಗಳಲ
ನಿನ್ನ ಹಿಡಿಕೆಯಲಿ ನನ್ನ ಕೈಬೆರಳುಗಳಿರಲಿ
ನುಡಿಸುತಲೆಂದೂ ಸ ರಿ ಗ ಮ ಪ

ಗೆಲುವು ಕಂಡಿದೆ ಈಗ ಈ ಕ್ಷಣ
ಹಗಲು ಇರುಳು ನಿನ್ನ ಕೂಡಿ ತೇಲುವಾಕ್ಷಣ  
ಸೇರಿ ಮಿಂದು ಮತ್ತೆಮತ್ತೆ
ಅದೇ ಗೆಲುವನು ಗುರಿಯಾಗಿಸುವ ಬಾರ
ಗಾಳಿ ಒಡನೆ ಕೂಡಿ ಆಡಿ

ಎಟುಕದಾದೂರಕೆ ಕೈ ಹಿಡಿದುಕರೆತಂದ
ಸುತ್ತ ಪಚ್ಚೆ ಹಸಿರು ಕೆಂಪು ಕಮಲ
ನೋಡುತಿರೆ ಬಾನಿನತ್ತ
ಹೊಕ್ಕಿ ಮೈಯ ತುಂಬಾ ಅಲೆಮುತ್ತನಿಟ್ಟ ನನ್ನಾಳುವ ಜಲತರಂಗ..

ಸೋಮವಾರ, ಜುಲೈ 9, 2012

ಮನಸ್ವಿಯ ಮಾತು..

ದೂಡಿ ಇವನತ್ತ ನನ್ನನಾಗಸಕ್ಕೆ
ಕಾದು ಕೂರೆ ನಿಶ್ಚಲ ನೀಲ ಕನ್ಯೆಯೇ
ಬಂದು ಹೇಳುವುದಿದೆ ಬಿಡಿಸಿ ನಿನಗೆ
ನಾ ಕಂಡ ಹೊನ್ನ ಪಲ್ಲಕ್ಕಿಯ ತೇರು ಇವನ ಕಣ್ಣಿನೊಳಗೆ

ಮಾತಿಗಿಳಿದು ವಿನಯ ಮೀರಿ ನಿಟ್ಟಿಸುತಿರೆ ನಯನ

ನಿಷಿದ್ಧ ನಿಶೆಯಲೇ ಬಿಡಿ ಮುತ್ತ ಒತ್ತಿಡುವಾಸೆ
ತಿರುಗಿ ಗೀಚೆ ಕದಲುವನೇನೋ ,ನಿಜ ಒಲುಮೆಯಲಿ
ಕೆನ್ನೆ ತುಂಬಾ ಕೆಂಬಣ್ಣ
ಈ ..
ಚೆಂದ ಬಣ್ಣಗಾರ !

ಇದೆಂಥಾ ಹಬ್ಬವೋ ಮನಸ್ವಿಯಂತಿದ್ದ ನನ್ನಲಿ
ಮನ್ವಂತರದ ರಂಗು ರಂಗೋಲಿ ಮೈಯಲಿ
ಚಿಗುರೆಲೆ ತೋರಣ ಕಿರು ದೀಪ ಕೈಹಿಡಿದ ಸಂಭ್ರಮದಿ
ಇಗೋ ತಂದಿಹೆನು ಬೊಗಸೆ ಮಲ್ಲಿಗೆ ಇಬ್ಬನಿ ಗಂಧ ಉಡುಗೊರೆಯಲಿ

ಬಟ್ಟೆ ತುಂಬಾ ಚಿಟ್ಟೆ ರಾಶಿ
ನಲಿವ ಬಣ್ಣಿಸ ಬೇಕೆ ?
ಹನಿಗವನ ಮಹಾಕಾವ್ಯವೇ ಆದೀತು
ದೂಡಿ ಇವನತ್ತ ನನ್ನನಾಗಸಕ್ಕೆ
ಕಾದು ಕೂರೆ ಕೃಷ್ಣ ಕನ್ಯೆಯೇ
ಬಂದು ಹೇಳುವುದಿದೆ ಬಿಡಿಸೆಲ್ಲವ ನಿನಗೆ
ಮನ್ಮಥನಾಡಿದ ಮಂಥನ ಮಾಯೆ !



ಬುಧವಾರ, ಜೂನ್ 27, 2012

ರೆಪ್ಪೆ -ರೆಕ್ಕೆ..


ರೆಪ್ಪೆ ಕಿತ್ತು ರೆಕ್ಕೆಗಂಟಿಸಿ ಹಾರಿಸಿದ್ದೆ ಕನಸೊಂದನು
ಕಣ್ಣಮುಂದೆಯೇ ಧರೆಗುರುಳಿ ನರಳುತಿದೆ ಇಂದು
ಏನಾಗದಂತೆ ನಟಿಸಬೇಕೆ ಈ ಹೊತ್ತಿನಲು ನಾ ನೇಪಥ್ಯದಲಿ ಕೂತು

ಹೇಳಲಾಗದೆ ಹಪಾಪಿಸುತಿರುವೆ ,ಅದಾವ ಕಾಲದ ಪಾಪವೋ ನನದು
ಬೊಬ್ಬೆ ಕಂಗಳ ರಕ್ತ ನರವು ಗಿಹಿಗಿಹಿ ನಗುತಿದೆ
ನಿನ್ನೆದೆಯ ತಳಮಳಕೆ ನೀನೆ ಹೊಣೆ ಎಂದು

ಕೈ ಕಿವುಚಿ ಕಾಲ ಹೊಸೆಯುತ್ತಾ ನೋವು ನುಂಗುವುದಷ್ಟೇ
ನನ್ನ ಪಾಲಿನ ಮೃಷ್ಟಾನ್ನವು
ತಿಂದು ತೇಗಿ ಮತ್ತೆ ನಾಳೆಗಳ ಕೂಡಿಸಿಕೊಂಡು ಹಾರಬೇಕು
ಇದೇ ನನ್ನ ಬಾಳ ಸಂಸ್ಕೃತಿಯು

ಪ್ರಾಸಕ್ಕೆಟುಕದ ಕವಿತೆ ನನ್ನದು
ತಿಳಿದಷ್ಟನ್ನೇ ಗ್ರಹಿಸಿ ಮುಂದೆ ಸಾಗಿ
ಭಾವುಕತೆಗೆ ಪ್ರಶ್ನೋತ್ತರ ಬೇಡ ದಯವಿಟ್ಟು.