ಶುಕ್ರವಾರ, ಸೆಪ್ಟೆಂಬರ್ 5, 2014

ಇನ್ನೇನು ಸಿಕ್ಕಿತೆನ್ನುವಷ್ಟರಲ್ಲಿ
ಕಂಡದೆಲ್ಲಾ ಕನಸು ಎಂಬ ವಾಸ್ತವದ ಅರಿವು 
ವ್ಯರ್ಥ ಪ್ರಯತ್ನಗಳ ಫಲವಿನರಿವಿದ್ದರು 
ಪ್ರಯತ್ನ ಅನಿವಾರ್ಯ
ಪ್ರಯೋಗಕಂಜಿದೆ ನನ್ನೊಳಗಿನ ನಾನು

ಬದುಕುವುದ ಕಲಿತೆ ಎನ್ನುವಷ್ಟರಲ್ಲಿ
ಪ್ರಪಂಚವೇ ತಿರುಚಿಮುರುಚಾಗಿ 
ಹಳೆ ಉತ್ತರಕ್ಕೆ ಹೊಸದೊಂದು ಪ್ರಶ್ನೆಯ ಹುಟ್ಟು
ನಾ ಮತ್ತಲ್ಲೇ ಬಂದು ನಿಂತೇ 
ಅಜ್ಞಾನದ ಹಾದಿಯಲಿ ಬದುಕು ಸವಿಯಲೆಂದು


ನಿರೀಕ್ಷೆಗಳಿರದು ಎಂದಿದ್ದೆ ನಾನೇ 
ಬಾಯರುವ ಮುನ್ಸೂಚನೆಯು ಸುಳಿಯದ ಹೊತ್ತು 
ಅದು ನಮ್ಮ ನಡುವೆ 

ತಿರುವು ತಿರುವಿಗೊಂದು ಹಂತ 
ಬದುಕು ನಿನ್ನ ಅವಲಂಬಿಸಿ ಹೆಣೆವ ತವಕ 
ಆ ತುದಿ ಸೇರುವ ತನಕ

ಉಸಿರ ಪರಿಮಳ ನೀನು , ಗಾಳಿಪಾಲಗದಿರು
ಕ್ಷಣ ಲಲ್ಲೆ ,ಒಣ ಮಾತು ತಂಪು ಸೆರೆ 
ಹೋಗೆಂದು ಹೇಗೆ ಹೇಳಲಿ 
ನಾಳೆ ಎಂಬುದೇ ಒಂದು ಊಹೆ 
ಇದ್ದರೂ ಇರು ಹೀಗೆ ಮಾತಿಗಾದರು ಇರಲಿ ಬೆಲೆ .

ಸಂಕಲ್ಪಕೆ ಬಿದ್ದ ಹೂ ..


ಇದ್ದಿದ್ದರೆ ಮರದಲ್ಲೇ 
ಮತ್ತಷ್ಟು ನಗುತ್ತಾ ಅರಳುತಿದ್ದೆಯೇನೋ !

ಕರಗಿ ಮಾಯವಾಗೋಣವೆಂದರೆ
ಬಿದ್ದಿರುವುದಾದರು ನುಣುಪು ಜಾರಿನ ಸೀಮೆಂಟು ನೆಲದಲ್ಲಿ
ನೆಲೆಯೂರುವ ತೃಷೆ ನಗೆಪಾಟಲಿಗೆ.
ನಗುವರ ಹಲ್ಲಿಗೆಂದೂ ಹೆದರಿಲ್ಲ
ಹೆದರಿಸಿರುವುದು ಅವರಿವರ ಬೂಟು ಚಪ್ಪಲಿಗಳ ಸದ್ದು .

ಗುಡಿ ಸೇರುವೆನೆಂದರೆ 
ಅರ್ಹತೆಯ ಮಾತಾಡಿ ಮಿಂಡೆ ಎಂದಿತು ಕಲ್ಲು ಶಿಲೆ .
ಅಳೂ
ಕರುಣೆ ಬಂದೀತು ಕಲ್ಲಿಗೆ ಎಂದರು
ರೆಪ್ಪೆಯು ಅಲುಗಲಿಲ್ಲ ಯಾಕೋ 
ರೋದನೆಯಂತು ಸೂರ್ಯ ಸಮುದ್ರದ ಅಂತರದಷ್ಟೇ
ಮೂಳೆ ಮಾಂಸದ ಅಣುವಿನೊಳಗೆ.

ಸ್ವಾಭಿಮಾನ ..

ಸಾಯುವ ಹಸಿವಿದ್ದರು
ಸ್ವಾಭಿಮಾನದ ಚಿಂತೆ
ಬಯಸಿ ಕೊಂಡ ಹಣ್ಣು 
ಹೊಟ್ಟೆ ಸೇರಿದ ತರುವಾಯ 
ತಿಂದೆ ಎನ್ನ ಕೊಲೆಗಾರ್ತಿ ಎಂದರೇ ?

ದಿನಕ್ಕೊಂದು ಎದೆಕಂಪಿಸುವ ಸವಾಲು
ಬಿಡಿಸದಿದ್ದರೆ ಕವಲೊಡೆದು 
ಎದೆ ಸೀಳಿ ಪ್ರತಿಭಟಿಸುವುದು
ಬಿಡಿಸಿದರೆ ಇನ್ನು ಮಜಬೂತು 
ನಾಳೆ ಬರುವವು

ನೂಕಿ ಭಯದ ಮಡುವಿಗೆ 
ಅವನಿಗೆನ್ನ ಅನಿಶ್ಚಿತ
ಗುರಿ ಮುಟ್ಟಿಸುವ ಹೆಬ್ಬಯಕೆ
ಕತ್ತಿಯಲಗಿನ ನಡೆಯಲ್ಲಿ
ಕಾಲು ಕೊಯ್ದು ರಕ್ತ ಸುರಿದರು 
ಕೈಚಾಚಿ ಅವನಿಗಾಗಿ
ಹೂ ಕೀಳುವ ಸ್ವಾರ್ಥ ನನಗೆ

ವಿರಹ ಜಾರಿ ಇಳೆಗೆ 
ಅನಿವಾರ್ಯದ ಕಡಲು ಸೇರಿದೆ 
ಎದೆಬಡಿತವು ತುಟಿಗೆರೆಗಳು
ಕೂಡಿಕೊಂಡ ತರುವಾಯ 
ಮಲಿನವಾಯಿತಲ್ಲೇ ಮೈಮನ ಎಂದರೇ ?


ತುಕಡಿ ..

ಚುರುಕು ಹೆಣ್ಣು ಆಕೆ,ನನ್ನಕನಸಿನಾಕೆ
ಒಲಿದರೆ ಹೊತ್ತೊಯ್ದುದು ಮುಸುರೆ ತಿಕ್ಕಲಿಡುವನು ಎಂದಳು 
ಸಲಹೆ ಕೇಳಿದಕ್ಕೆ.
*
ಪ್ರಶ್ನೆ ಕೇಳಿ 
ಅವನ ಉತ್ತರವಷ್ಟೇ ಮರುಜೀವ ನನಗೆ ಎಂಬಂತೆ ದಿಟ್ಟಿಸಿದೆ
ಬೇರೊಬ್ಬಳ ಜಡೆ ಸಂದು ನೋಡುತ್ತಾ ,ಹೋ ಎಂದವನ
ಅಷ್ಟೇ ಸಲೀಸಾಗಿ ಪ್ರಶ್ನೇ ನಿನಗಲ್ಲಾ ಎಂದೇ. 
*
ಉಗಿಯುತ್ತಿದೆ ಬೆತ್ತಲಾಗಿಸಿ
ಬಾಯ ಹೊಲಸ ಮಾಡದೆ 
ತೃಪ್ತಿ ತಾನೇ ಪಡೆದುಕೊಳ್ಳುತ್ತಿದೆ
ಅತೃಪ್ತಿಯ ಜಗಿಯುತ್ತಲಿ
ನನ್ನೊಳಗಿನ ಜೀವ ಕ್ರಿಯೇ ಇದು ಎಂದರೆ
ಇನ್ನೂ ಮುದ್ದಾದ ಹೆಸರಿಟ್ಟು ಇದನೆಲ್ಲಾ ಕವನಾವತಾರ ಎನ್ವರಲ್ಲೇ !
*

ಲುಪ್ತ ಮನಸ್ಸ ಹಾಗೆ ತೇಲಿಸಿಬಿಡುವ ಶಕ್ತಿ ಉಂಟು ಏಕಾಂತಕ್ಕೆ
ಮಾನುಷ್ಯ ಮುಖಗಳಿರುವುದಿಲ್ಲಾ,
ಗೋಜು ಗಲೀಜುಗಳ ಸುಳಿವೂ ಸಿಗುವುದಿಲ್ಲಾ
ನಿರ್ವಾಣ ಭಾವವದು, ನಿರಾಕರಿಸಲು ಮನಸ್ಸೊಪ್ಪದು..
*
ಬಿಸಾಡಿದ್ದನೆಲ್ಲಾ ಬಾಚಿ ತಿಂದೆ 
ಗೌರವವಿರಲಿ,ಅರೆಹೊಟ್ಟೆಯು ತುಂಬಲಿಲ್ಲಾ
ತಪ್ಪು ಅವನದಲ್ಲಾ
ರುಚಿ ಹಿಡಿಸಿದ್ದೆಲ್ಲಾ ಹೊಟ್ಟೆಗಿಳಿದು ಜೀರ್ಣವಾಗಿ
ನರನರವನೆಲ್ಲಾ ಸೇರಿ ಧಮನಿಗಿಳಿದು 
ಬಡಿತವಾದೀತು ಎಂದು ನಂಬಿದ್ದು ನಾನು!

*
ಅದೆಷ್ಟು ಅರಿವಿನ ಸಂಜೆ ಕಳೆದಿದ್ದೇನೆ ಅವನೊಟ್ಟಿಗೆ
ಶಬ್ದವಿರಲಿಲ್ಲಾ ,ಮೌನ ಲಹರಿಯದು 
ದೊಂಬರಾಟವಿರಲಿಲ್ಲಾ , ಧ್ಯಾನಗ್ರಸ್ಥ ನಡಿಗೆಯದು 
ಶೋಕಿಯಾಟವಿರಲಿಲ್ಲಾ , ಮರಂದ ನಗುವದು
ಬೇಡಿಕೆಗಳಿರಲಿಲ್ಲಾ ,ಹಗಲುಗನಸಿನ ಹುಡುಗನಿವನೆಂದು ನನಗು ತಿಳಿದಿತ್ತು
ಕಳೆಯಲಿದ್ದೇನೆ ಇನೆಲ್ಲಾ ಸಂಜೆ ಅವನಿಗರಿವಿಲ್ಲದೆಯೇ ಅವನೋಟ್ಟಿಗೆ, ಹೀಗೆ...

*
ಕೇಳಿದ್ದಾದರು ಏನನ್ನು !
ಅವನ ಪಾಲಿನ ನಗು ,ಉತ್ಕರ್ಷ, ಹೊನಲು 
ನನಗವನು ಕೊಟ್ಟಿದು
ನನ್ನದಲ್ಲದ ನಿಟ್ಟುಸಿರು,ಉಮ್ಮಳ,ಹೊಲಸಿನವಳು ಎಂಬ ಹಣೆ ಪಟ್ಟಿ.

* 
ಆಸೆಗಳಷ್ಟು ಜರ್ರನೆ ನೆಲ ಉರುಳುವಾಗ 
ಅವಳಿಗಾದ ಹಾನಿ ಎಷ್ಟೋ ಅನಾಹುತಗಳೆಷ್ಟೋ
ಮಡಿದ ಕ್ರೌರ್ಯಗಳು ಮಸಣ ಸೇರಲಿ ಹೀಗೆ 
ಹೂ ಮಾಲೆ ಹುಡುಕುವ ಬನ್ನಿ ,ಭೂ ತಾಯಿಗೊಂದಿಷ್ಟು ಹಿತವೆನಿಸಬಾರದೆ ..

*
ಪ್ರೀತಿಯೆಡೆಗೆ
ಬದುಕಿನ ನಿರಂತರ ಅನ್ವೇಷಣೆ
ಇದುವರೆಗೂ ದಕ್ಕದ್ದು ಮುಂದೆಯೂ ದಕ್ಕದು
ನಾನು ಕೇಳಿ ಪಡೆಯದ ವಸ್ತು
ನಿಮ್ಮದು ಮೃದುಭಾವನೆಗಳ ತುಡಿತಕೆ ವೇದಾಂತ ಹೇಳುವ ಶಿಸ್ತು

*
ಒಡಲಾಳದ ಆಸೆಗಳ ಬಯಲಿಗಿಟ್ಟ ಕೂಸು ನಾನು
ಒಂದ ಹನಿಯೂ ಬಿಡದೆ ಒಂದೊಂದನ್ನು ಹೆಕ್ಕಿ ಅನುಭವಿಸುವ ಆಸೆ ನನಗೆ
ನಗೆ ಬಿಡಿ ಹೂವ ಮುಡಿದು ಸಾಗಿರುವೆ ನಾನು
ನಗು ಬಾಡದಿರಲಿ ಅಳು ಬಾರದಿರಲೆಂಬ ಅಸ್ವಾಭಾವಿಕ ಆಸೆ ನನಗೆ

*
ದುರಂತಕ್ಕೆ ಕಾರಣ ಸಿಗದಿದ್ದಾಗ 
ಅದುವೇ ರೋಚಕ
ರೋಚಕ ಪ್ರೀತಿಯೊಳಗೆ ವಯಕ್ತಿಕತೆ ಮಾಯವಾದಾಗ 
ಅದುವೇ ದುರಂತ 


ಹಿಡಿಯಲಾದಿತೆ ..

ಹಿಡಿಯಲಾದಿತೆ ಈಗೋ ಈ ಧೋ ಮಳೆಯ
ಹೊತ್ತು ಸುರಿದು ,ಮೈ ಕೆಸರಾಗಿಸಿ
ಕೊಚ್ಚಿ ಹೋಗಲೆಂದೇ ಬಂದ ದಿಗಂಬರನ
ಸೆರೆ ಹಿಡಿಯಲಾದೀತೆ 

ಗುದ್ದಾಡಿ ಒಳ ನುಗ್ಗುವ ಅದೃಷ್ಯ ನೆನಪುಗಳ
ಬಿಚ್ಚಿ ತೋರಿಸಲಾದಿತೆ 
ಆಗೊಮ್ಮೆ ಅಳು,ಈಗೊಮ್ಮೆ ನಗೆ ಎಬ್ಬಿಸಿ
ಅಂತರಾಳಕೆ ಜಾರಿಕೊಳ್ಳುವ ಆ ಗುಪ್ತವನಿತೆಯರ 
ಕರೆ ತಂದು ನಿಲ್ಲಿಸಲಾದೀತೆ 

ಎಲ್ಲರ ಎದೆಯಲ್ಲಿ ಅವರದ್ದೇ ಖಾಸಗಿ ನೆನಪುಗಳ
ಕಿರು ಕಿಟಕಿಗಳು ,ಎಟುಕಲಾರವು ಅವರಿವರ ಕೈಗೆ
ಎಟುಕಿದರು ಏನೈತಿ ಅದರೊಳಗೆ
ತಿದ್ದಿ ತೀಡಿದ ಪರಭಾಷಾ ಗೋಡೆಬರಹಗಳಷ್ಟೇ..


ಸಹಿಸಿಕೊಳ್ಳಿ ..

ಜನರ ಬಲಿಷ್ಠ ನಂಬಿಕೆಗಳ ಬುಡಕ್ಕೆ 
ಕೊಳ್ಳಿ ಇಡಲು ಯತ್ನಿಸುವ ನಾವು 
ಹಿಡಿದ ಅಷ್ಟೂ ದಾರಿಯೂ ಒರಟಾದದ್ದೇ
ದ್ವಂದ್ವಕ್ಕಿಳಿದ ಹುಚ್ಚಾಟವೆನಲ್ಲಾ ಇದು 
ಸರಿ ತಪ್ಪುಗಳ ನಡುವೆ ಇರುವ 
ರೇಷ್ಮೆ ಎಳೆಯ ಅಂತರ ಅತ್ತಿಂದ ಇತ್ತ ,ಇತ್ತಿಂದ ಅತ್ತ 
ಚಲಿಸುತ್ತಾ ಮನಸ್ಸಿಗೆ ಇರಿಯಲಾರಂಭಿಸಿರುತ್ತದೆ 
ಹೋರಾಟದ ಬುಗ್ಗೆ ತಣ್ಣಗಾಗಬೇಕಾದರೆ 
ಕ್ರಾಂತಿಯಾಗಬೇಕು ಇಲ್ಲವೋ ಪ್ರಯೋಗಗಳು ವಿಫಲವಾಗಬೇಕು
ಸ್ವಲ್ಪ ಸಹಿಸಿಕೊಳ್ಳಿ ಸುಂದರ ಮಾನುಷ್ಯರಾಗಲು ಹೊರಟವರು ನಾವು
ಹರಿಸಬೇಕ್ಕಿದ್ದ ಅಷ್ಟೂ ಕಣ್ಣಿರೂ
ಗಳಿಸಬೇಕ್ಕಿದ್ದ ಎಷ್ಟೋ ಕರುಣೆಯನ್ನು
ವಿನಮ್ರವಾಗಿ ಅಲ್ಲಗಳೆದಿದ್ದೇವೆ
ಭಂಡತನವೆನಬೇಡಿ ಈ ವ್ಯಕ್ತಿ ವೈಶಿಷ್ಟ್ಯತೆಯನ್ನು 
ಕರೆದೊಮ್ಮೆ ಎದೆಗಪ್ಪಿ ಕೇಳಿ ನೋಡಿ
ತರಂಗಗಳೇಳಬಹುದು ನಿಮ್ಮ ಅಂತರಂಗದ ತೀರದಲ್ಲೂ..