ಶುಕ್ರವಾರ, ಸೆಪ್ಟೆಂಬರ್ 5, 2014

ಸುತ್ತಲ ನಿಖಿಲ ಕ್ರಿಯೆಯು ನಿಶ್ಚಲ
ಇಂದು ಇಲ್ಲಿ ನನಗೆ ನನ್ನೊಳಗಿಂದು
ಸ್ಪುಟ ಆವೇಶ ಜೊಂಪೆ ಜಂಜಾಟ
ಆಳ ಹರಡಿದ ಪಕ್ವ ಬೇರು
ಹಣ್ಣು ಹೆರಲು ಅಲ್ಲಗಳೆದಿದೆ
ಕಾರಣ ಬರಿಯ ಗೌಣ.
ಜೋತಾಡುವ ರಕ್ಕಸ ಅಪ್ರೌಢಿಮೆಗಳು
ಬೆಳಕು ಎರಚಿ ಬಡಿದು ಕೂರಿಸುವ
ಕುಶಲತೆ ಒಲಿದಂದು ನಾನು ಪೂರ್ತಿ ಪ್ರೌಢಯಳು..
ಮಣ್ಣು ಗೊಬ್ಬರ ಹೊಂದಿ ಪುಷ್ಟಿ ಸರಿ
ಹೊಂದಿಕೆಯ ಪ್ರಕ್ರಿಯೆಯೇ ಕಹಿ
ಗಂಟಲೊಳಗಿಳಿಯದ ಗೋಪಾನಕ
ಘರ್ಷಿಸಿ ಅತ್ತು ಕರೆದು ಕಡೆಗೆ ಬೆರೆಯಲೇಬೇಕು
ಜಿಗುಟುವ ಕೈಯ ಸೋಕದ ಮೋಡದೆತ್ತರಕೆ ಬೆಳೆದು
ನೆರಳುಬಿಂಬಿಸುವ ಹೆಪ್ಪು ಮರವಾಗಲೇಬೇಕು...


ನಿಗೂಢತೆಯನ್ನರಿವ ಪ್ರಯತ್ನ 
ನಗ್ನ-ನರಳು 
ಆಗಮನ-ಅಗಲಿಕೆ 
ಪರಸ್ಪರ ಇಷ್ಟೇಕೆ ಹತ್ತಿರ!

ಮಾತಿನಲ್ಲಿ ನಟನೆಯ ಮೋಡಿ
ಹೆಚ್ಚು ಆಡಿದರೆ ಬಣ್ಣ ಕಳೆಚುವ ಭೀತಿ 
ಆಡದೆ ಮಲಗಿದಾಗ ಹುಟ್ಟಿದ್ದು 
ಕುಗ್ಗಿಸುವ ಕಣ್ಣಂಚಿನ ಬಿಸಿ ಇಬ್ಬನಿ.
ಹುಡುಕುತ್ತಿದ್ದೇನೆ ಪೂರ್ತಿ ಪ್ರಜ್ಞೆಯಲಿ 
ಜಡ ಕಟ್ಟದ ಸ್ಥಿರ ಚಿತ್ತ ಒಂದನ್ನ
ಸುಕ್ಷ್ಮತೆಯಲ್ಲಿ ಸಾವಿರಾರು ಸಲ ಮಿಂದೆದ್ದ
ಅಜ್ಞಾತ ಗುಪ್ತ ಆ ಮನ

ಆಳದಲೆಲ್ಲೋ ಹೊಮ್ಮುವ ನಾದಸ್ವರ 
ಏಕಾಗ್ರ ಅಜರ ಹಿರಿ ಬೇಲಿಯ ಸಾಂತ್ವನ
ನಾನು ನೀನೆನ್ನದ ನಿತ್ಯ ಮಿತಿ ಲಯದ 
ಸೃಷ್ಟಿಯಾಗಾಧತೆಯಲ್ಲಿ ನನ್ನದೇ ಚೇತನ
 
ಒಪ್ಪಿಗೆ ತನ್ನತನದ ಕಗ್ಗೊಲೆ
ನಾನು ನಾನಾಗದೆ ಬೇರಾರದೋ
ಕಲ್ಪನೆ ಅಡಿ ಸಿಲುಕಿ ನಲುಗುವ ಕ್ರಿಯೆ

ಅವರಿವರಿಗೆ ಇಂದು ತಪ್ಪೆನಿಸಿದರು
ಅಂದು ನನಗದು ಶಾಶ್ವತ ಸತ್ಯ
ಕರುಗುವ ಕಾಮನಬಿಲ್ಲು ವಿಚಿತ್ರವಾದರೂ
ಮುನ್ನವದು ಸ್ವರ್ಗೀಯ ಸುಂದರ ಚಿತ್ರ

ಬದಲಾವಣೆ ನವ್ಯ ಚರಿತ್ರೆಗೆ ನಾಂದಿಯಾದರೆ
ಪಾಪ ನಿವೇದನೆ ಹೊಂದಿಕೊಳ್ಳಲಾಗದ ವಾಸ್ತವಕ್ಕೆ
ನಾವು ಎಸೆಯೋ ಕಡು ಸ್ಪಷ್ಟನೆ

ಗೋಗರೆದು ತಪ್ಪೋಪ್ಪಿಸಿ
ಮತ್ತದರೊಳಗೆ ಮುಳುಗಿ ಕೊಳೆಯುವ ಬದಲು
ಮಾಡಿರುವುದ ಅರಿತು
ಬದಲಾವಣೆಯ ಮನೋಧರ್ಮ ಸಿದ್ದಿಸುವುದು ಲೇಸೆನಿಸಿದೆ


ಇನ್ನೇನು ಸಿಕ್ಕಿತೆನ್ನುವಷ್ಟರಲ್ಲಿ
ಕಂಡದೆಲ್ಲಾ ಕನಸು ಎಂಬ ವಾಸ್ತವದ ಅರಿವು 
ವ್ಯರ್ಥ ಪ್ರಯತ್ನಗಳ ಫಲವಿನರಿವಿದ್ದರು 
ಪ್ರಯತ್ನ ಅನಿವಾರ್ಯ
ಪ್ರಯೋಗಕಂಜಿದೆ ನನ್ನೊಳಗಿನ ನಾನು

ಬದುಕುವುದ ಕಲಿತೆ ಎನ್ನುವಷ್ಟರಲ್ಲಿ
ಪ್ರಪಂಚವೇ ತಿರುಚಿಮುರುಚಾಗಿ 
ಹಳೆ ಉತ್ತರಕ್ಕೆ ಹೊಸದೊಂದು ಪ್ರಶ್ನೆಯ ಹುಟ್ಟು
ನಾ ಮತ್ತಲ್ಲೇ ಬಂದು ನಿಂತೇ 
ಅಜ್ಞಾನದ ಹಾದಿಯಲಿ ಬದುಕು ಸವಿಯಲೆಂದು


ನಿರೀಕ್ಷೆಗಳಿರದು ಎಂದಿದ್ದೆ ನಾನೇ 
ಬಾಯರುವ ಮುನ್ಸೂಚನೆಯು ಸುಳಿಯದ ಹೊತ್ತು 
ಅದು ನಮ್ಮ ನಡುವೆ 

ತಿರುವು ತಿರುವಿಗೊಂದು ಹಂತ 
ಬದುಕು ನಿನ್ನ ಅವಲಂಬಿಸಿ ಹೆಣೆವ ತವಕ 
ಆ ತುದಿ ಸೇರುವ ತನಕ

ಉಸಿರ ಪರಿಮಳ ನೀನು , ಗಾಳಿಪಾಲಗದಿರು
ಕ್ಷಣ ಲಲ್ಲೆ ,ಒಣ ಮಾತು ತಂಪು ಸೆರೆ 
ಹೋಗೆಂದು ಹೇಗೆ ಹೇಳಲಿ 
ನಾಳೆ ಎಂಬುದೇ ಒಂದು ಊಹೆ 
ಇದ್ದರೂ ಇರು ಹೀಗೆ ಮಾತಿಗಾದರು ಇರಲಿ ಬೆಲೆ .

ಸಂಕಲ್ಪಕೆ ಬಿದ್ದ ಹೂ ..


ಇದ್ದಿದ್ದರೆ ಮರದಲ್ಲೇ 
ಮತ್ತಷ್ಟು ನಗುತ್ತಾ ಅರಳುತಿದ್ದೆಯೇನೋ !

ಕರಗಿ ಮಾಯವಾಗೋಣವೆಂದರೆ
ಬಿದ್ದಿರುವುದಾದರು ನುಣುಪು ಜಾರಿನ ಸೀಮೆಂಟು ನೆಲದಲ್ಲಿ
ನೆಲೆಯೂರುವ ತೃಷೆ ನಗೆಪಾಟಲಿಗೆ.
ನಗುವರ ಹಲ್ಲಿಗೆಂದೂ ಹೆದರಿಲ್ಲ
ಹೆದರಿಸಿರುವುದು ಅವರಿವರ ಬೂಟು ಚಪ್ಪಲಿಗಳ ಸದ್ದು .

ಗುಡಿ ಸೇರುವೆನೆಂದರೆ 
ಅರ್ಹತೆಯ ಮಾತಾಡಿ ಮಿಂಡೆ ಎಂದಿತು ಕಲ್ಲು ಶಿಲೆ .
ಅಳೂ
ಕರುಣೆ ಬಂದೀತು ಕಲ್ಲಿಗೆ ಎಂದರು
ರೆಪ್ಪೆಯು ಅಲುಗಲಿಲ್ಲ ಯಾಕೋ 
ರೋದನೆಯಂತು ಸೂರ್ಯ ಸಮುದ್ರದ ಅಂತರದಷ್ಟೇ
ಮೂಳೆ ಮಾಂಸದ ಅಣುವಿನೊಳಗೆ.