ಶನಿವಾರ, ಮಾರ್ಚ್ 17, 2012

ಭಯ ಭಾವ..

ನಾ ಅದೆಂದೋ ರೂಪಿಸಿದ್ದ ಅಂತರವಿಂದು
ರೂಪಾಂತರಗೊಂಡಿದೆ
ವಸಂತನ ತೆರೆಯಂಚಿನಾಕರ್ಷಣೆ
ಜಡೆಹರಡಿದ ಬೆನ್ನ ಸವರಿದಂತಿದೆ

ನೀನು ಸುರಿಸಿದಷ್ಟನ್ನೂ ಹೀರಿ ಸವಿದು
ಅತೃಪ್ತಳಾಗೆ ಉಳಿಯುವಾಸೆ
 ಆದರೆ
ಕೊಂಚ ಮುಗ್ಧವೆನಿಸುವಷ್ಟು ಸಲುಗೆ
ಸೋಕಿದೊಡನೆ ಗರಿಗೆದರುವಾಸೆ ನೀಲಾಗಾಧದಂತಿದೆ..

ಕತ್ತಲೆದೆಯ ಬಯಲಿನಲ್ಲಿ ನೊರೆಹಾಲು ಬಿಳಿಯ
ಮಂದಹಾಸದಾಮಂಜು ನೀನು ಮಳೆ ಮಾನವ
ಮುದ್ದೆ ಮೋಡದ ಹಿಂದೆ ಅವಿತಿರುವ ಧೀರನೆ
ಧರೆಗಿಳಿದು ‘ಧೋ’ ಕರಿಯುವುದಕೇಕೋ ಮುಜುಗರದಾಟ!

ಚಂದದಲ್ಲಿ ಸ್ಥಿರನು ನೀನು
ಸ್ಥಿರತೆಯಲ್ಲಿ ನಿನ್ನ ಮೀರಿಸಬಲ್ಲೆ ನಾನು
ತೆರೆದಿಟ್ಟ ನನ್ನೆಲ್ಲ ಸಾವಿರೆದೆಯ ಕಣ್ಣಿಗೆ,ನಿನ್ನ ಸೃಷ್ಟಿಯ  
ತಂಪು ವಾತಾವರಣದ ಹಿತವಿದ್ದರಷ್ಟೇ ಸಾಕು..

ಬರುವಿಕೆಯನ್ನೇ ಬಾಯ ಬಿಟ್ಟು ಕಾಯುವ ಹೂವಲ್ಲ ನಾನು
ನಿರೀಕ್ಷೆಯಲ್ಲಿ ಬಿರುಕುಬಿಟ್ಟ ಒಡಲ ಭೂವನಿತೆಯಲ್ಲಾ ನಾನು
ಇದ್ದರಾ ಗುಡ್ಡದೆತ್ತರದ ನಿರಾಸಕ್ತಿಯು
ಬಂದಾಗೆಲ್ಲಾ ಥಳಥಳಿಸಿ ನಗಲುಬಲ್ಲ ನಗೆನವಿಲು ನಾನು

ಕಾಲಕುಂಚ ನದಿಹಾಳೆಗೆ ಗೀಚಿದ
ವಿಧಿಯಗೆಲ್ಲಿಯ ನಾವು ಬಯಸುವಾ ತುದಿ
ಈ ಮಿಂಚಿನಾಟಕಂಜಿ ದಿಗ್ಗನೆ ಪಂಚೇಂದ್ರಿಯ
ಕೆದರಿ ನಾ ಓಡುವೆ ಆ ಹೆಪ್ಪು ಬಯಲಿನಲಿ..

ಅದ್ಯಾಕೊ ಮಳೆ ಧರೆಗಿಳಿಯುವ ಮೊದಲೇ ಘನ
ಭಾವ ಬಿಂದು ಇಂಗುವ  ಭಯ ಭಾವ ಮುಡಿಗೇರಿದೆ

ಏನೇ ಇರಲಿ ,
ಅದೆಂದೋ ರೂಪಿಸಿದ್ದ ಅಂತರವಿಂದು
ಪೂರ್ಣಪ್ರಮಾಣದಲ್ಲಿ ರೂಪಾಂತರಗೊಂಡಿದೆ
ವಸಂತನ ತೆರೆಯಂಚಿನಾಕರ್ಷಣೆ
ಜಡೆಹರಡಿದ ಬೆನ್ನ ಸವರಿದಂತಿದೆ ..