ಶನಿವಾರ, ಅಕ್ಟೋಬರ್ 18, 2014

ವರ್ಷವತಿ..

ಹೀಗೆ ಕೈಗಳ ತುಟಿಯಾಗಿಸಿ ನಿಂತುಬಿಡಬೇಕು
ಒಮ್ಮೊಮ್ಮೆ ಮಗುವಂತೆ ಬಯಲಲಿ
ಜೊಂಪು ನಿದ್ದೆಯಲು ಕಣ್ಣ ಅರಳಿಸಿ
ನನಗೆಷ್ಟು? ನನ್ನ ಕಿರು ತುಟಿಗಳ ಅಂಚಿನಿಂದ ಚಿಮ್ಮಿ ದಕ್ಕಿದ್ದು, ಭವನೆ
ನಿನಗೆಷ್ಟು? ಎಂದು ಲೆಕ್ಕಹಾಕಬೇಕು..ಮೈಮರೆತು
ಈ ವರ್ಷವತಿಯ ಮಡಿಲಲಿ
ಹೊದ್ದು ಮಲಗಿಸುವ ಸುಖದ ವಿನೋದಕಲ್ಲಾ
ಸೃಷ್ಟಿಯ ವಿಕಾಸಕ್ಕಾಗಿ.

ಬೊಗಸೆ ಹಿಡಿದ ಸಿಹಿ ನೀರಲೊಮ್ಮೆ ಮುಳುಗೆದ್ದು ಬರಬೇಕು
ಇದೇ ಪ್ರಥಮದಲಿ ತಳ ಅನ್ವೇಷಣೆಗಾಗಿ ಹೊರಟ ಮೀನಿನಂತೆ,ಅದೃಶ್ಯವಾಗಿ
ಹುಡುಕುವುದೇ ಹುಟ್ಟು ಎಂದಾಗ,ಮತ್ತೆ ಮತ್ತೆ ಹುಟ್ಟಿಬರಬೇಕು
ಗರ್ಭದೊಳಗಿನ ಭ್ರೂಣ
ಕೊಳವೂ ನಮ್ಮದೇ ,ಮೀನೂ ನಾವೇ
ತಳ ಮುಟ್ಟುವ ಆಟಕಿದೊಂದು ನೆವ ಮಾತ್ರ.