ಗುರುವಾರ, ಸೆಪ್ಟೆಂಬರ್ 13, 2012

ನಾ ದೋಣಿಯಾದೆ ಅಂದಿನಿಂದ..


ನೀಲಿ ಬಾನಿಗಿರದ ಭಾಗ್ಯ
ಒಲಿದು ಬಂತು ನನಗೆ
ಉತ್ಫುಲ್ಲ ತೋಳ ತೆಕ್ಕೆಯಲ್ಲಿ
ನದಿ ಎದೆಯ ಹಾಡ ಕೇಳುವ ಆ ಸುಧೆ
ಸೋಕುವವರೆಗೂ ನಿರ್ಭಾವ

ಸೋಕಿದಂದಿನಿಂದ ಇಬ್ಬರದೊಂದೇ ಭಾವ
ಕಚಗುಳಿ ಅಲೆಅಲೆ ತೋಯ್ದ ಮನಗಳಲ
ನಿನ್ನ ಹಿಡಿಕೆಯಲಿ ನನ್ನ ಕೈಬೆರಳುಗಳಿರಲಿ
ನುಡಿಸುತಲೆಂದೂ ಸ ರಿ ಗ ಮ ಪ

ಗೆಲುವು ಕಂಡಿದೆ ಈಗ ಈ ಕ್ಷಣ
ಹಗಲು ಇರುಳು ನಿನ್ನ ಕೂಡಿ ತೇಲುವಾಕ್ಷಣ  
ಸೇರಿ ಮಿಂದು ಮತ್ತೆಮತ್ತೆ
ಅದೇ ಗೆಲುವನು ಗುರಿಯಾಗಿಸುವ ಬಾರ
ಗಾಳಿ ಒಡನೆ ಕೂಡಿ ಆಡಿ

ಎಟುಕದಾದೂರಕೆ ಕೈ ಹಿಡಿದುಕರೆತಂದ
ಸುತ್ತ ಪಚ್ಚೆ ಹಸಿರು ಕೆಂಪು ಕಮಲ
ನೋಡುತಿರೆ ಬಾನಿನತ್ತ
ಹೊಕ್ಕಿ ಮೈಯ ತುಂಬಾ ಅಲೆಮುತ್ತನಿಟ್ಟ ನನ್ನಾಳುವ ಜಲತರಂಗ..

ಸೋಮವಾರ, ಜುಲೈ 9, 2012

ಮನಸ್ವಿಯ ಮಾತು..

ದೂಡಿ ಇವನತ್ತ ನನ್ನನಾಗಸಕ್ಕೆ
ಕಾದು ಕೂರೆ ನಿಶ್ಚಲ ನೀಲ ಕನ್ಯೆಯೇ
ಬಂದು ಹೇಳುವುದಿದೆ ಬಿಡಿಸಿ ನಿನಗೆ
ನಾ ಕಂಡ ಹೊನ್ನ ಪಲ್ಲಕ್ಕಿಯ ತೇರು ಇವನ ಕಣ್ಣಿನೊಳಗೆ

ಮಾತಿಗಿಳಿದು ವಿನಯ ಮೀರಿ ನಿಟ್ಟಿಸುತಿರೆ ನಯನ

ನಿಷಿದ್ಧ ನಿಶೆಯಲೇ ಬಿಡಿ ಮುತ್ತ ಒತ್ತಿಡುವಾಸೆ
ತಿರುಗಿ ಗೀಚೆ ಕದಲುವನೇನೋ ,ನಿಜ ಒಲುಮೆಯಲಿ
ಕೆನ್ನೆ ತುಂಬಾ ಕೆಂಬಣ್ಣ
ಈ ..
ಚೆಂದ ಬಣ್ಣಗಾರ !

ಇದೆಂಥಾ ಹಬ್ಬವೋ ಮನಸ್ವಿಯಂತಿದ್ದ ನನ್ನಲಿ
ಮನ್ವಂತರದ ರಂಗು ರಂಗೋಲಿ ಮೈಯಲಿ
ಚಿಗುರೆಲೆ ತೋರಣ ಕಿರು ದೀಪ ಕೈಹಿಡಿದ ಸಂಭ್ರಮದಿ
ಇಗೋ ತಂದಿಹೆನು ಬೊಗಸೆ ಮಲ್ಲಿಗೆ ಇಬ್ಬನಿ ಗಂಧ ಉಡುಗೊರೆಯಲಿ

ಬಟ್ಟೆ ತುಂಬಾ ಚಿಟ್ಟೆ ರಾಶಿ
ನಲಿವ ಬಣ್ಣಿಸ ಬೇಕೆ ?
ಹನಿಗವನ ಮಹಾಕಾವ್ಯವೇ ಆದೀತು
ದೂಡಿ ಇವನತ್ತ ನನ್ನನಾಗಸಕ್ಕೆ
ಕಾದು ಕೂರೆ ಕೃಷ್ಣ ಕನ್ಯೆಯೇ
ಬಂದು ಹೇಳುವುದಿದೆ ಬಿಡಿಸೆಲ್ಲವ ನಿನಗೆ
ಮನ್ಮಥನಾಡಿದ ಮಂಥನ ಮಾಯೆ !



ಬುಧವಾರ, ಜೂನ್ 27, 2012

ರೆಪ್ಪೆ -ರೆಕ್ಕೆ..


ರೆಪ್ಪೆ ಕಿತ್ತು ರೆಕ್ಕೆಗಂಟಿಸಿ ಹಾರಿಸಿದ್ದೆ ಕನಸೊಂದನು
ಕಣ್ಣಮುಂದೆಯೇ ಧರೆಗುರುಳಿ ನರಳುತಿದೆ ಇಂದು
ಏನಾಗದಂತೆ ನಟಿಸಬೇಕೆ ಈ ಹೊತ್ತಿನಲು ನಾ ನೇಪಥ್ಯದಲಿ ಕೂತು

ಹೇಳಲಾಗದೆ ಹಪಾಪಿಸುತಿರುವೆ ,ಅದಾವ ಕಾಲದ ಪಾಪವೋ ನನದು
ಬೊಬ್ಬೆ ಕಂಗಳ ರಕ್ತ ನರವು ಗಿಹಿಗಿಹಿ ನಗುತಿದೆ
ನಿನ್ನೆದೆಯ ತಳಮಳಕೆ ನೀನೆ ಹೊಣೆ ಎಂದು

ಕೈ ಕಿವುಚಿ ಕಾಲ ಹೊಸೆಯುತ್ತಾ ನೋವು ನುಂಗುವುದಷ್ಟೇ
ನನ್ನ ಪಾಲಿನ ಮೃಷ್ಟಾನ್ನವು
ತಿಂದು ತೇಗಿ ಮತ್ತೆ ನಾಳೆಗಳ ಕೂಡಿಸಿಕೊಂಡು ಹಾರಬೇಕು
ಇದೇ ನನ್ನ ಬಾಳ ಸಂಸ್ಕೃತಿಯು

ಪ್ರಾಸಕ್ಕೆಟುಕದ ಕವಿತೆ ನನ್ನದು
ತಿಳಿದಷ್ಟನ್ನೇ ಗ್ರಹಿಸಿ ಮುಂದೆ ಸಾಗಿ
ಭಾವುಕತೆಗೆ ಪ್ರಶ್ನೋತ್ತರ ಬೇಡ ದಯವಿಟ್ಟು.  




ಶನಿವಾರ, ಮೇ 12, 2012

ನಿಶೆಯೊಡಲಿನಲಿ..

ಹೊದ್ದೇನ ಮಲಗಲಿಂದು,
ಹನಿ ಬಿದ್ದು ಹೂ ಎದ್ದು ಕುಣಿಯುತಿರೆ ಮೋಜಿನಲಿ
ಕಾಫಿಗತ್ತಲ ಕರಸ್ಪರ್ಶದ ಕನಸು ವಿಫಲವಾಗುತಿಹುದು
ವೇಣಿ ಗಾಳಿಯ ಏಕಾಂತದಲಿ

ಕದ್ದೇನ ತರಲಿಂದು,
ಕಾರ್ಮೋಡದ ಕಿರು ದಾರಿ ಕತ್ತಲಿನಲಿ ನಿನಗಾಗಿ
ಒಂಟಿ ತಾರೆ ದೀಪ ಹಿಡಿದು ಬಂದರಷ್ಟೇ ಸಾಕಲ್ಲವೆ
ಭೂಮಂಡಲ ಬಳಸಿ ಬರುವ ನಿಶೆಯೊಡಲಿನಲಿ

ಭ್ರಮಿಸುವಷ್ಟು ಸೆಳೆಯುವ ತೊಳಾಸರೆಯೊಂದಿದೆ
ಬಳಿಹೋಗುವಮುನ್ನ ಅದ್ಯಾಕೋ ನಾಚಿಕೆ ಮೈಯ ತಬ್ಬಿ ನಿಂತಿದೆ
ಒಂದೆರಡು ಮುತ್ತ ಒತ್ತಿ ಕೊಟ್ಟರೆ ದೂರ ಸರಿಯುವುದೇನೊ
ಪ್ರಶ್ನೆಗುತ್ತರ 'ತಿದ್ದಿ ಬರೆದ ತಪ್ಪಿನೊಳಗಿದೆ ' 

ತೊಟ್ಟಿಕ್ಕುವ ಎಲೆ ಎದೆಹನಿಯ ಮುಡಿಗಿಟ್ಟು ಬರುವೆನಾಗ
ಮುಂಗುರುಳಿನ ಬೆರಳ ಜೋಗುಳದ ಸೋಗಿನಲಿ
ಹಸಿಯುಸಿರ ಬಿಗಿಯಪ್ಪುಗೆಗಳಲಿ ನಿನ್ನ
ಪಿಸುಮಾತಲ್ಲುಸುರುವ ಶಾಖ ಹೊದ್ದು ಮಲಗುವೆನಾನಗ..  


ಶುಕ್ರವಾರ, ಏಪ್ರಿಲ್ 13, 2012

ಅದೆಂಥ ದಿನಗಳವು..

ಮತ್ತೆ ಹಾರುವ ಧೈರ್ಯ ಮಾಡಲೇನ ಸಣ್ಣಗೆ
ಕೊಕ್ಕಿನೊಳು ಸಿಕ್ಕಿಬಿದ್ದ ಜೀವದಂತೆ
ದುಃಖ ಉಮ್ಮಳಿಸಿ ಬಂದರೆ ಹಿಂದಿನಂತೆ?

ಅದೆಂಥ ದಿನಗಳವು
ಜಿಗಿದಾಡುತಿತ್ತು ಮನ ಜಗದಗಲವು ಸ್ವಚ್ಛ ಸ್ವಪ್ನ ಸೀಮೆಯಲಿ,ಮೀರಿಸುವ
ಎದೆಬಡಿತವಿತ್ತು ಗಾಳಿಯೊಂದಿಗೆ ಪೈಪೋಟಿಯೊಳು
ಮರೆಯಾಗಿಯೇ ಹೋದವು ;ಅದೆಂಥ ದಿನಗಳವು
  

ರಾಶಿ ಬೀಜ ಉದುಕಿ ತಂದು ,ಕಂಗಳ
ಹೊಲದಲೊಬ್ಬಳೇ ಬಿತ್ತಿ ನಲಿದಿದ್ದೆನು
ಈಗ ಪಟಪಟಿಸುವ ರೆಪ್ಪೆ ಮೊಳೆತ ಚೂಪು
ತಾಗಿ ಇರಿಯುತಿರೆ ಅಭಿಮಾನದಲಿ ಶುಭ ಹೇಳ ಹೋಗಲೇನು ?

ಬಾನು ಬಣ್ಣ ಗೊಂದಲದಲಿ ನಕ್ಕು ನಲಿದಿದ್ದೆನು
ಪಾರಿಜಾತ ಗಿರಿಯ ಹಾರ ಹಿಡಿದು ಕಾದಿದ್ದೆನು
ಈಗ ಮುಗಿಲ ಕದದಲಿ ನಗುತಿಹುದು ಗೇಲಿ ಬೀಗ
ನಾನೀಗ ಶೃತಿಹಿಡಿದ ಮೌನರಾಗ !

ಶನಿವಾರ, ಮಾರ್ಚ್ 17, 2012

ಭಯ ಭಾವ..

ನಾ ಅದೆಂದೋ ರೂಪಿಸಿದ್ದ ಅಂತರವಿಂದು
ರೂಪಾಂತರಗೊಂಡಿದೆ
ವಸಂತನ ತೆರೆಯಂಚಿನಾಕರ್ಷಣೆ
ಜಡೆಹರಡಿದ ಬೆನ್ನ ಸವರಿದಂತಿದೆ

ನೀನು ಸುರಿಸಿದಷ್ಟನ್ನೂ ಹೀರಿ ಸವಿದು
ಅತೃಪ್ತಳಾಗೆ ಉಳಿಯುವಾಸೆ
 ಆದರೆ
ಕೊಂಚ ಮುಗ್ಧವೆನಿಸುವಷ್ಟು ಸಲುಗೆ
ಸೋಕಿದೊಡನೆ ಗರಿಗೆದರುವಾಸೆ ನೀಲಾಗಾಧದಂತಿದೆ..

ಕತ್ತಲೆದೆಯ ಬಯಲಿನಲ್ಲಿ ನೊರೆಹಾಲು ಬಿಳಿಯ
ಮಂದಹಾಸದಾಮಂಜು ನೀನು ಮಳೆ ಮಾನವ
ಮುದ್ದೆ ಮೋಡದ ಹಿಂದೆ ಅವಿತಿರುವ ಧೀರನೆ
ಧರೆಗಿಳಿದು ‘ಧೋ’ ಕರಿಯುವುದಕೇಕೋ ಮುಜುಗರದಾಟ!

ಚಂದದಲ್ಲಿ ಸ್ಥಿರನು ನೀನು
ಸ್ಥಿರತೆಯಲ್ಲಿ ನಿನ್ನ ಮೀರಿಸಬಲ್ಲೆ ನಾನು
ತೆರೆದಿಟ್ಟ ನನ್ನೆಲ್ಲ ಸಾವಿರೆದೆಯ ಕಣ್ಣಿಗೆ,ನಿನ್ನ ಸೃಷ್ಟಿಯ  
ತಂಪು ವಾತಾವರಣದ ಹಿತವಿದ್ದರಷ್ಟೇ ಸಾಕು..

ಬರುವಿಕೆಯನ್ನೇ ಬಾಯ ಬಿಟ್ಟು ಕಾಯುವ ಹೂವಲ್ಲ ನಾನು
ನಿರೀಕ್ಷೆಯಲ್ಲಿ ಬಿರುಕುಬಿಟ್ಟ ಒಡಲ ಭೂವನಿತೆಯಲ್ಲಾ ನಾನು
ಇದ್ದರಾ ಗುಡ್ಡದೆತ್ತರದ ನಿರಾಸಕ್ತಿಯು
ಬಂದಾಗೆಲ್ಲಾ ಥಳಥಳಿಸಿ ನಗಲುಬಲ್ಲ ನಗೆನವಿಲು ನಾನು

ಕಾಲಕುಂಚ ನದಿಹಾಳೆಗೆ ಗೀಚಿದ
ವಿಧಿಯಗೆಲ್ಲಿಯ ನಾವು ಬಯಸುವಾ ತುದಿ
ಈ ಮಿಂಚಿನಾಟಕಂಜಿ ದಿಗ್ಗನೆ ಪಂಚೇಂದ್ರಿಯ
ಕೆದರಿ ನಾ ಓಡುವೆ ಆ ಹೆಪ್ಪು ಬಯಲಿನಲಿ..

ಅದ್ಯಾಕೊ ಮಳೆ ಧರೆಗಿಳಿಯುವ ಮೊದಲೇ ಘನ
ಭಾವ ಬಿಂದು ಇಂಗುವ  ಭಯ ಭಾವ ಮುಡಿಗೇರಿದೆ

ಏನೇ ಇರಲಿ ,
ಅದೆಂದೋ ರೂಪಿಸಿದ್ದ ಅಂತರವಿಂದು
ಪೂರ್ಣಪ್ರಮಾಣದಲ್ಲಿ ರೂಪಾಂತರಗೊಂಡಿದೆ
ವಸಂತನ ತೆರೆಯಂಚಿನಾಕರ್ಷಣೆ
ಜಡೆಹರಡಿದ ಬೆನ್ನ ಸವರಿದಂತಿದೆ ..

ಗುರುವಾರ, ಫೆಬ್ರವರಿ 16, 2012

ಧುಮ್ಮಿಕ್ಕಿ ಹರಿದಿದೆ..

ಮತ್ತದೇ ತೊರೆ ಧಮನಿಯೊಳಗಿಳಿದು ಧುಮ್ಮಿಕ್ಕಿ ಹರಿದಿದೆ
ಮಂದ ಬೆಳಕಿನ ಈ ತಿಳಿ ನೆರಳು 
ಬೆಟ್ಟದೆತ್ತರದ ಖುಷಿಯ ಬಾಚಿ ಮಡಿಲ ತುಂಬಿದಂತಿದೆ..
ಬೆಳಗಿಬ್ಬನಿ ದೂರದಿಂದ ಮೆಟ್ಟಲಿಳಿದು ಬರುತಿದೆ
ಪಾರದರ್ಶಕ ಮೊಗದ ತುಂಬಾ ನಿರ್ಲಿಪ್ತತೆಯ ಗುಲ್ಲೆಬ್ಬಿದೆ
ದಿನಗಳಿಂದ ಸೊರಗಿದ್ದ ನಗು ಕ್ಷಣದಲ್ಲೇ ರಾಶಿ ರಾಶಿ ಉಲ್ಬಣಿಸಿದಂತಿದೆ..

ಆಚೆ ದಿಗಂತದ ತುದಿಗಿದ್ದ ಮೌನ ಧರೆಗಿಳಿದು
ನನ್ನೊಳಗಿನಿ ಭಾವ ಕುಸುಮದಾ ಪುಷ್ಟಿಗೆ
ಮಧುವ ಎರೆಯಲು ಮಂದಹಾಸದಿ ನಿಂತಂತಿದೆ

ಮತ್ತದೇ ಸಿಹಿ ನೀರ ತೊರೆ ಧಮನಿಯೊಳಗಿಳಿದು ಧುಮ್ಮಿಕ್ಕಿ ಹರಿದಿದೆ
ಬೆಟ್ಟದೆತ್ತರದ ಖುಷಿಯ ಬಾಚಿ ಮಡಿಲ ತುಂಬಿದಂತಿದೆ..

ಶನಿವಾರ, ಫೆಬ್ರವರಿ 4, 2012


 ನಾಲ್ಕು ದಿನದ ಹಿಂದಿ ಕಾರಣಾಂತರಗಳಿಂದ ಕ್ಲಾಸಿನ ಹುಡುಗನೊಬ್ಬ ತೀರಿಕೊಂಡ,ಸುದ್ದಿ ಕಾಲೇಜಿನ ತುಂಬಾ ಹಬ್ಬಿ ನಿಂತಿತ್ತು .ವಿಸ್ತರಿಸಿ ಹೇಳಬೇಕಾದರೆ ಹುಡುಗನೊಬ್ಬ ನೊಂದು ರೈಲಿನ ಕಾಲಡಿಯಲ್ಲಿ ತಲೆಕೊಟ್ಟು  ದೇಹವ ಕಸದಂತೆ ಅನಾಥವಾಗಿ ‘ಶಿರವಿರದ ಶವ’ವೆಂಬ ಪರಿಸ್ತಿಯಲ್ಲಿ ಬಿಟ್ಟು ಹೋಗಿದ್ದನು .
ನನ್ನ ಭಾವೋದ್ವೇಗ ಆತ ಸತ್ತಿದಕ್ಕೋ ಅಥವ ಅವನ ಸಾವಿನ ಸುತ್ತ ಸೆರೆನಿಂತಿದ್ದ ಕಾರಣಗಳ ಕುರಿತಾದದ್ದೋ ಅಲ್ಲಾ,ನಿನ್ನೆಯಷ್ಟೇ ನೋಡಿದ್ದ ವ್ಯಕ್ತಿಯ ಸಾವಿನ ಸುದ್ದಿ ತಿಳಿದ ನಾನು ಪ್ರತಿಕ್ರಯಿಸಿದ ಅನಾಚಾರದ ರೀತಿ ಮತ್ತು ನೀತಿಭ್ರಷ್ಟತೆಯ ಕುರಿತಾಗಿ.
ಕಾರಣ ನೂರಾರಿದೆ ,
  • since i was one among the crowd i couldn’t respond.
  • ಯಾರೋ ಹೊರ ರಾಜ್ಯದ ಹುಡುಗ, ನಾನು ಆತನ ಸಾವಿಗೆ ಪ್ರತಿಕ್ರಯಿಸೋದು over acting ಅನ್ಸಲ್ವ .
  • ಲೇಟ್ ಆದ್ರೆ Attendence ಕೊಡಲ್ಲ ,ಮತ್ತ ಅಲ್ಲಿ ಪೊಲೀಸ್ಸು,ಪ್ರೆಸ್ಸು ನನ್ನಗ್ಯಾಕೆ ಇದರ ಉಸಾಬರಿ ಎಲ್ಲಾ..!

ಹತ್ತಾರು ಚಿಂತನ ಮಂಥನ ಮೆದುಳ ತುಂಬಾ ಮಂಕು ಎರಚಿತ್ತು.ತುರ್ತು ಪರಿಸ್ತಿತಿಯಲ್ಲಿ to be on the safer side ನಮಗೆ ನಾವೇ  ಕೊಟ್ಟುಕೊಳ್ಳುವ ಸಮಜಾಯಿಷಿ ಮಾತುಗಳಲ್ಲವೇ ಇದು!ನನ್ನ ಹಾಗೆ ಎಲ್ಲರೂ ಬುದ್ದಿ ದೌಡಾಯಿಸಿರ ಬಹುದು,ಹಾಗಾಗಿಯೇ ಏನೋ ಕ್ಲಾಸಿನ ಇಬ್ಬರು ಹುಡುಗರು ಬಿಟ್ಟರೆ ಕಾಲೇಜಿನಿಂದ ಒಬ್ಬ ನರ ಜೀವಿಯು ತಕ್ಷಣಕ್ಕೆ ಸಹಕರಿಸುವುದಿರಲಿ ಸ್ಪಂದಿಸಲೂ ಸೋತಿದ್ದರು.

ಪರಿಸ್ತಿಯ ಗಾಂಭೀರ್ಯತೆಯ ಅರಿವಾಗಿದ್ದರೆ ,ನನ್ನ ಮೂರ್ಖತನದ ಅರಿವೂ ನಿಮಗಾಗಿರುತ್ತೆ .ವಿಪರ್ಯಾಸವೆಂದರೆ ನಮ್ಮನ ನಾವು ಈ ದಿನೇ ಎಷ್ಟರ ಮಟ್ಟಿಗೆ ತಾಂತ್ರಿಕವಾಗಿಸಿದ್ದಿವೆಂದರೆ ,ಎಲ್ಲದಕ್ಕೂ ಯೋಚಿಸುತ್ತೇವೆ.ಕೆಲಸ ಮಾಡುವ ಮುನ್ನ ಅನಾನುಕೂಲ ,ಲಾಭ,ಲೋಪಗಳ ಪಟ್ಟಿ ಮಾಡುತ್ತೇವೆ ..ಯಾರಾದರು ಆಕಾಶ ತೋರಿಸಿ,how beautiful is the sky today ಅಂದ್ರೆ ,yes since it is summer disappearance of clouds are the reason to it ಅನ್ನತ್ತೀವಿ.ನಮ್ಮನ ಎಷ್ಟರ ಮಟ್ಟಿಗೆ ಬದಲಾಯಿಸಿ ಬಿಟ್ಟಿದಾರಂದ್ರೆ “thinking out of the technology is a crime”ಅನ್ನೊ ರೀತಿ ವರ್ತಿಸ್ತೀವಿ .
 
ಕ್ಲಾಸ್ನಲ್ಲಿ ಎಲ್ಲರು ನನ್ನ ಹಾಗೆ ಯೋಚಿಸಿದ್ದ್ರಲ್ಲ ಅನ್ನೊ ತೃಪ್ತಿ ನನ್ನ್ಗಂತೂ ಖಂಡಿತ ಇಲ್ಲ ,ನಾನು ಎಲ್ಲರ ಹಾಗೆ ಯೋಚಿಸೊದನ್ನ ಕಲ್ತ್ಬಿಟ್ಟನಲ್ಲ ಅನ್ನೊ ಸಣ್ಣ ಮರುಗು ಅಂತು ಇದೆ.ಇಷ್ಟಂತೂ ನಿಜ ಮುಂದೆ ನನ್ನ ಸ್ತಿಥ ಪ್ರಜ್ಞೆಯಲ್ಲಿ ಇಂಥ ಅಮಾನವೀಯತೆಯ ದೊಂಬರಾಟ ಖಂಡಿತ ನಡೆಯೋದಿಲ್ಲ ಎಂದು ನಿರ್ಧರಿಸಿದ್ದೇನೆ.


-ಗಗನ  ಮೈತ್ರಿ

ಶನಿವಾರ, ಜನವರಿ 14, 2012

೧. ನಾವು ಕಲಿಯುತ್ತಿರುವ ಶಿಕ್ಷಣ ನಮ್ಮ ಬದುಕಿಗೆ ಪೂರಕವಾಗಿದಿಯೇ ?
ಶಿಕ್ಷಣ ಎಂಥದೇ ಇರಲಿ ,ಕಲಿಕೆ ಮತ್ತು ಗ್ರಹಿಕೆಯ ಗುಣಮಟ್ಟ ಶ್ರೇಷ್ಠವಾಗಿರಬೇಕು .ಶಿಕ್ಷಣ ತಾತ್ಕಾಲಿಕ ಜ್ಞಾನವಲ್ಲ ,ಅದು ಜೀವಿಯಿಂದ ಜೀವಿಗೆ ಜೀವನವನ್ನೇ ವರ್ಗಾಹಿಸುವಂತಹದು.ಬಹುಷಃ ಇಂದು ಶಿಕ್ಷಣ ತನ್ನ ಮುಲ್ಯಗಳನ್ನು ಕಳೆಚಿ ಅರೆ ಬೆತ್ತಲೆ ನಿಂತಂತೆ ಭಾಸವಾಗುತ್ತಿದೆ.ಗಂಟೆಹಿಂದೆ ಓದಿದ್ದನ್ನ ಮತ್ತೊಂದು ಗಂಟೆಕೂತು ಕಕ್ಕುವುದಷ್ಟೇ ಇವತ್ತಿನ ಶಿಕ್ಷಣ ವ್ಯವಸ್ಥೆ ,ಹೀಗಿರುವಾಗ ಜ್ಞಾನಾರ್ಜನೆ ಹೇಗೆ ಸಾದ್ಯ!

ಹೇಳಿದ್ದೇ ಹೇಳುವರು ,ಕೇಳಿದ್ದೇ ಕೇಳುವರು
ಕೇಳಿದ್ದೇ ಕೇಳಿ ಸುಖಿಸುವರು ಜ್ಞಾನಿ
ಗಳ ಮಾರ್ಗವೇ ಬೇರೆ ಸರ್ವಜ್ಞ..

ಸರ್ವ ಜ್ಞಾನಿಯ ಈ ನುಡಿಮುತ್ತು ಸಾಕು ಇಂದಿನ ಶಿಕ್ಷಣದ ರೂಪು ರೇಖೆಯನ್ನು ತೂಗಿ ನೋಡಲು.
ಶಿಕ್ಷಣ ಎಂದಿಗೂ ಒಬ್ಬ ಮಾಮೂಲಿ ಮನುಷ್ಯನನ್ನು ಪ್ರಬುಧ್ಧ ವ್ಯಕ್ತಿಯನ್ನಾಗಿಸುವ ಚಟುವಟಿಕೆಯಂತಿರಬೇಕು ,ಮುಂದೆ ಬದುಕ ಮಹಡಿ ಕಟ್ಟುವ ಸ್ವಪ್ನದಲ್ಲಿರುವವನಿಗೆ ಪೂರಕ ಗುಣಮಟ್ಟದ ಇಟ್ಟಿಗೆ ,ನೀರು,ಸಿಮೆಂಟು ಒದಗಿಸಿ ತನ್ನ ಇಷ್ಟಾರ್ತದಂತೆ ಕಟ್ಟಡ ನಿರ್ಮಿಸುವ ದಿಕ್ಕಸೂಚಿಯಾಗಬೇಕು.ಆದ್ದರಿಂದು ಶಿಕ್ಷಣ ದುಡ್ಡಿನ ಮಹಾಮಳೆಯಡಿ ಸಮಯದ ಜೋರು ಪ್ರವಾಹಕ್ಕೆ ಸಿಕ್ಕ ಸಣ್ಣ ಹಾಯಿ ದೋಣಿಯಂತಾಗಿದೆ.ಹೀಗಿರುವಾಗ ಬೆಳವಣಿಗೆ ಹೇಗೆ ಸಾದ್ಯ!

ಮಹಾನ್ ತಪಸ್ವಿಯಂತೆ ಸುಧೀರ್ಗ ವರ್ಷಗಳ ಅಭ್ಯಾಸದ ನಂತರ ಕೊನೆಗೊಂದು ದಿನ ತನ್ನ ಕಲಿಕೆಗಿಂದು ಕೊನೆ ಎಂದು ಹೊರ ದೌಡಾಯಿಸುವ ವಿಧ್ಯಾರ್ಥಿಯ ಕೈಯಲ್ಲಿ ಪದವಿ ಪತ್ರ ಬಿಟ್ಟರೆ ಕನಿಷ್ಠ ಒಂದಾದರು ವಿಷಯದಲ್ಲಿ  ಪಾಂಡಿತ್ಯವಿರದ ಡೊಳ್ಳು ತಲೆ..ಹೋಗಲಿ ಒಂದಿಷ್ಟು ಮಾನವೀಯತೆ ,ಶೃಜನಶೀಲತೆ,ನೈತಿಕಯ ಸೊಬಗಾದರು ಬೇಡವೇ ?ಎಲ್ಲೋ ಬೆರಳೆಣಿಕೆಯ ಜನಕಷ್ಟೆ..ಇಂದಿನ ಈ ಪರಿಸ್ತಿತಿಗೆ ಕಾರಣ ,ಶಿಕ್ಷಣವೆಂದರೆ ಯುದ್ಧದಂತಾಗಿರುವುದು .ಶಿಕ್ಷಣ ದುಡಿಮೆ ಅಥವ ಭೋಗದ ವಸ್ತುವಲ್ಲ, ಅದೊಂದು ನಿರಂತರ ನಿಟ್ಟುಸಿರಿನವರೆಗೂ ಕಾಲದ ಪರಿವಿಲ್ಲದೆ ಬದುಕ ಹೆಣೆಯುವ ಕಲೆ.ಬರೀ ಪದ್ಧತಿ ,ಬಂಧನ ಮತ್ತು ಆಡಳಿತಕ್ಕೆ ಸೀಮಿತವಾಗಿರುವ ಇಂದಿನ ಶಿಕ್ಷಣ ಮುಂದಿನ ಬದುಕಿಗೆ ಪೂರಕವೇ ಅಲ್ಲಾ.

ಚಿಂತಕರ ಪ್ರಕಾರ ಸಮಾಜ ಸೇವೆ ,ಸ್ವಇಚ್ಚಿತ ಜವಾಬ್ದಾರಿ,ಸದ್ ವರ್ತನೆ ,ಸತ್ ಚಿಂತನೆಗಳಂತಹ ಕಾರ್ಯ ಯುವ ಪ್ರಜೆಗಳಿಗೆ ಹೆಚ್ಚು ವೈಭವಿಕರಿಸುತ್ತದೆ .ಚಿಂತನೆಯಲ್ಲಿ ಅಂಥ ದೊಡ್ಡ ಲೋಪ ದೋಷಗಳೇನು ಇಲ್ಲ ,ಉರಿಯುವ ಮೇಣದ ಬತ್ತಿಯೊಂದೆ ಉಳಿದ ಮೇಣದ ಬತ್ತಿಗಳನ್ನು ಉರಿಯುವಂತೆ ಮಾಡಬಲ್ಲದಲ್ಲವೇ ? ಹಾಗಂತ ಧಂಗೆ ಎದ್ದು ,ಹೋರಾಟಕ್ಕಿಳಿದು ,ಚಳುವಳಿ ಕೂಗಬೇಕಂತೆನಿಲ್ಲ.ನಮ್ಮ ನಮ್ಮ ಯೋಚನಾ ಲಹರಿಯನ್ನು ಸ್ವಲ್ಪ ತೀವ್ರವಾಗಿಸಬೇಕಷ್ಟೇ , ಜಗತ್ತಿನ ಪ್ರತಿ ಶೃಷ್ಟಿಗು ಪಕ್ಷಪಾತರಹಿತವಾದ ಬಾಳ್ವೆಗೆ ಅವಕಾಶವಿದೆ ಎಂಬುದ ತಿಳಿದು ,ಪರಿಸರದ ಕುರಿತು ಒಂದಷ್ಟು ಜಾಗೃತಭಾವ,ಸರ್ವರಿಗೂ ಸಮಬಾಳು –ಸರ್ವರಿಗೂ ಸಮಪಾಲು ಎಂಬ ಚಿಂತಾಕ್ರಾಂತಿ ಇದ್ದರಷ್ಟೇ ಸಾಕು ಇಂದು ಚಾಲನೆಯಲ್ಲಿರುವ ಬಹುತೇಕ ಕಿವುಡು ಸಮಸ್ಯೆಗಳು ಬಗೆಹರಿದಂತೆಯೇ !
ಜಿ ಎಸ್ ಶಿವರುದ್ರಪ್ಪನವರ ಚಂದದ ಸಾಲುಗಳು ,

ಅದೂ ಬೇಕು ಇದೂ ಬೇಕು ,ದಾರಿ ನೂರಾರಿವೆ ಬೆಳಕಿನರಮನೆಗೆ!
ನೂರಾರು ಭಾವದ ಭಾವಿ ,ತೋಡಿಕೊ ನಿನಗೆ ಬೇಕಾದಷ್ಟು ಸಿಹಿನೀರು
ಪಾತ್ರೆಯಾಕಾರಗಳ ಕುರಿತು ಜಗಳವೇಕೆ !

ನಮ್ಮಿಂದ ಸಮಾಜದ ನಿರ್ಮಾಣ ಎಂಬ ಸಣ್ಣ ಸತ್ಯ ಪ್ರಜ್ಞಾವಂತ ಯುವಜನಾಂಗದ ಪೂರ್ವಸಿದ್ಧ ಆಲೋಚನೆಯಾಗಬೇಕು . ಜವಾಬ್ದಾರಿಗಳಲ್ಲಿ ಅತಿ ಶ್ರೇಷ್ಠವಾದದ್ದೆಂದರೆ ಶಿಕ್ಷಣ ಧರ್ಮವೆಂಬುದ ಅರಿತು ,ತಮಗೆ ತಿಳಿದದ್ದನು ಸಮಾಜಕ್ಕೆ ಧಾರೆ ಎರೆಯುವುದೇ ಯುವಜನಾಂಗದ ಮುಖ್ಯ ಕರ್ತವ್ಯವಾಗಬೇಕು .ಉಪನಿಷತ್ತಿನ ಪ್ರಕಾರ ‘ಪತಿತಂ ,ಪತಂತಂ ,ಪತಶ್ಯಂತಂ,ಉದ್ಧರೇತ್ ಧರ್ಮಃ ‘ಅಂದರೆ ಬಿದ್ದಿರುವವನು ,ಬೀಳುತ್ತಿರುವವನು,ಮುಂದೆ ಬೀಳಲಿರುವವನು ,ಇವರನ್ನು ಉದ್ಧಾರ ಮಾಡುವುದೇ ಧರ್ಮ . ಜಾಗೃತ ಮನಸುಳ್ಳ ,ಸುಉದ್ದೇಶಕ್ಕೆಂದು ಹೊರಟ ಯುವಜನಾಂಗಕ್ಕೆ ಮಹಾಕವಿಯು  ಕವಿವಾಣಿಯನ್ನೇ ಹಾಡಿದರು ,


ನಡೆಮುಂದೆ ನಡೆಮುಂದೆ          

ನುಗ್ಗಿನಡೆ ಮುಂದೆ

ಜಗ್ಗದೆಯೇ ಕುಗ್ಗದೆಯೇ

ಹಿಗ್ಗಿನಡೆ ಮುಂದೆ.. 


ಸಮಾಜಸೇವೆ ,ಸಾಮಾಜಿಕ ಕಳಕಳಿಗಳಂತಹ ಜವಾಬ್ದಾರಿಗಳನ್ನು ಹೊರ ಬಯಸುವವನಿಗೆ ಮೊದಲು ಆತ್ಮವಿಶ್ಲೇಷಣೆ ಬೇಕು ,ಯುವ ಪ್ರತಿಭೆಗಳಿಗೆ ಮೊದಲು ತಮ್ಮ ತಮ್ಮ ಅವಶ್ಯಕತೆಗಳ ಅರಿವಿರಬೇಕು ,ಮುಂದಾಳತ್ವದ ಮುನ್ನೋಟವಿರುವವನಿಗೆ ತನ್ನ ಅವಶ್ಯಕತೆಗಳ ಅರಿವಿಲ್ಲದಿದ್ದರೆ ಹೇಗೆ ?necessity is the mother of invention ‘ಅವಶ್ಯಕತೆಯೇ  ಅನ್ವೇಷಣೆಯ ತಾಯಿ ‘.

ಶಿಕ್ಷಣ ಜೀವನದ ಗುರಿಯಲ್ಲಾ ದಾರಿಯಾಗಬೇಕು ,’ಜ್ಞಾನಕ್ಕಾಗಿ ಜ್ಞಾನ’ ಎನ್ನುವುದು ವ್ಯಕ್ತಿಗುಣವಾಗಬೇಕು ,’ಜೀವನಕ್ಕಾಗಿ ಶಿಕ್ಷಣವಲ್ಲ ಜೀವನದ ಮುಖಾಂತರ ಶಿಕ್ಷಣ’ ಎಂತಾದಾಗಷ್ಟೇ ಶಿಕ್ಷಣದ ವಿಶಾಲಾರ್ಥ ತಿಳಿದು ಕಲಿತಿರುವುದು\ಕಲಿಯುತ್ತಿರುವ ವಿದ್ಯೆ ಬದುಕಿಗೆ ಪೂರಕವಾಗಬಹುದು !






ಭಾನುವಾರ, ಜನವರಿ 8, 2012

ಮನದ ತೀರದ ತುಂಬಾ ಮರೆಯದ ಹೆಜ್ಜೆಗುರುತು..

ಹೂವ ಕಿತ್ತು ಸಮಾಧಿಯ ಮೇಲಿಟ್ಟ ಭಾವದಲೂ...


                                          
ಏನಾಗಿದೆ ನನಗೆ ,ನಗೆ ಮೂಡಿದೆ ಶೂನ್ಯದಲು
ಹೂವ ಕಿತ್ತು ಸಮಾಧಿಯ ಮೇಲಿಟ್ಟ ಭಾವದಲೂ..

                                                                       ದಿಕ್ಕು ದಿಕ್ಕು ದಿಶೆಯಲ್ಲೂ ಸೀಳು ಹೊಕ್ಕ ಬೆಳ್ಳ ಮುಗಿಲು 

                                                         ಕಾಡುತಿದೆ ಇವುಗಳ ಮುಸುಕು ಮುಸುಕು ಆಕೃತಿಗಳು
                                                         ತೊರೆಯಲಾರೆ ,ನನ್ನ ನಗಿಸಲು ನಿಂತವರಿವರು
                                                         ಜಾರಿ ಬಿತ್ತು ಸುಳ್ಳು ನಗೆಯೊಂದು ,ಜಾರದಿರೆಂದೆ ಕಣ್ಣ ಹನಿಯನು..

  ತಿರುಗಾಡುತ ತಿಮಿರ ತೋರುವ ಗಾಳಿ ಗೊಂಚಲು
  ಕದಡುವುದೆನ್ನೆದೆ ,ತುಡಿತಗಳ ತವರೂರ ಬಂಧುಗಳ ಕಂಡು

  ಹೊರದಬ್ಬಲಾರೆ ,ನನ್ನ ರಂಜಿಸಲು ಬಂದವರಿವರು
  ಉಕ್ಕಿ ಬಂತು ಜೊಳ್ಳು ನಗೆಯೊಂದು ,ಉಗುಳದಿರೆಂದೆ ಮನದಾಳದ ನೋವನು..

                                                                    ನೊಂದ ಭಾವ ಕೊರಳ ಹಿಸುಕಿ ,ಸೊರಗುವಂತೆ ಮಾಡಿತ್ತು
                                                       ಎಲ್ಲಾ ಪ್ರಶ್ನೆಗಳ ಉತ್ತರದಂತೆ ತುದಿಯವರೆಗು ನೆರಳು ಬಿಸಿಲು ಕಂಡಿತು
                                                       ಬದುಕ ನಡೆಸುವ ಬಗೆ ಹೀಗೆ ಎಂದು ಸಣ್ಣ ಭಾವಗೀತೆ ಹಾಡಿತು
                                                       ಕಿರುನಗೆಯೊಂದು ಆಗ ತುಟಿಮೇಲೆ ಕಮಲದಂತೆ ಅರಳಿತು..

    

ಮಳೆ ಬಂತು ,ನೆನಪ ತಂತು..

                                ಬಿಡದೆ ಸುರಿವ ನೆನಪ ಮಳೆ ,ಬಿಡುವವರೆಗು ಬಿಗಿ ಹಿಡಿಯಲೇ ಬೇಕು ಮೌನ ಕೊಡೆ..

ಭಾವ ಬೃಂದ ..


                ದೂರದ ಮನೆಯೊಂದು ಮನತುಂಬಿ ಕರೆದಿದೆ
                ಮರುಳು ಮನಸು ಮಥಿಸಿ ಮೌನರಾಗ ಹಾಡಿದೆ ..
                ಹೋಗುವ ದಾರಿಯಲ್ಲಿ ಪ್ರೀತಿ ಬತ್ತಿ ನೆನಪು ಮೈನೆರೆದಿದೆ
                ಮನೆಮುಂದೆ ಸ್ತಬ್ದ ಸಡಗರದ ರಂಗೋಲಿ ರೋಸಿ ನಿಂತಿದೆ
                ಮಾತಾಡಲು ಹೂ ಜೋತ ಭಾವಚಿತ್ರವೊಂದು ತೂಗಾಡಿದೆ
                ಹೆಜ್ಜೆ ಸದ್ದನ್ನೂ ಗ್ರಹಿಸುವಷ್ಟು ಮೌನ ಮಾತು ನುಂಗಿದೆ.
                                                                  ನನಗ್ಯಾಕೋ ಇಂದು,
                                                                  ತಂತಿ ಕಿತ್ತ ದಹನ ಗಾನದಿಂಪು ಹಾಯಾಗಿದೆ
                                                                  ಕಂಡ ನೋಟವೆಲ್ಲ ಬಿಳಿಯ ವಸ್ತ್ರ ಮೇಲಿನ ಹಾರದಂತಿದೆ..

ಬದಲಾದ ಜಗದೊಟ್ಟಿಗೆ ಹದಗೆಟ್ಟಿದ ಬದುಕು..

(ನನ್ನ ಮೊದಲ ಲೇಖನ)

 ಜಗದ  ಪ್ರತಿ  ಸೃಷ್ಟಿಗೂ ತನ್ನದೇ ಆದ ಕೆಲ ಕಟ್ಟುಪಾಡುಗಳಿವೆ. ಹರಿಯೋ ಝರಿ,ಹಾರೋ ಹಕ್ಕಿ ,ಸೊಂಪಾಗಿ ಹೂ ಬಿರಿದು ನಗೋ  ಬಳ್ಳಿ ಮೇಲ್ನೋಟಕ್ಕೆ ನಮಗೆ ಹಾಯಾಗಿ ಕಂಡರೂ , ಅವರ ಚಿಂತೆಯ  ಬಳುವಳಿಯ  ಬುತ್ತಿಯನ್ನು ಬಿಚ್ಚಿಡಲು ಯಾರಿಗೆ ಸಾಧ್ಯ ! ಆದರೂ  ಅವರಿಗೆ ಯಾರ ಹಂಗೂ  ಬೇಕಿಲ್ಲ,ಸೃಷ್ಟಿಯು ಇವರಿಗೊಡ್ಡಿರುವ ಆದಿ ಅಂತ್ಯಗಳಷ್ಟೇ ಲಗಾಮು .
ಆದರೆ ಯಾಕೋ ಮನುಕುಲ ಇವೆಲ್ಲಕಿಂತ ತೀರ ತುಚ್ಹ  ಮಟ್ಟದ ಪರಿಸ್ಥಿತಿಗೆ ಬಂದಿಳಿದಿದೆ .ತಾಯಿಯೇ ಮೊದಲ ಗುರು ಎಂದು ಕೇಳಿದ್ದಿವಿ ,ಆದರೆ ಇಂದಿನ ಸಮಾಜದಲ್ಲಿ ತಾಯಿಯರು  ಕೂಡ  modern ಆಗಿ ಬದಲಾಗಿದ್ದಾರೆ !ಮಗು ಮಾತು ಕಲಿಯಲು ಆರಂಭಿಸಿತೆಂದರೆ ಸಾಕು A B C D ಯನ್ನು Z  ವರೆಗೆ ಕಲಿಸಿ,ಶಾಲೆಗೆ ದಬ್ಬುತ್ತಾರೆ.ಇಲ್ಲಿಂದ ಪ್ರಾರಂಭವಾಗುತ್ತೆ ಸುಧೀರ್ಘವಾದ 18 ವರ್ಷಗಳ ಕಾರಾಗೃಹವಾಸ .ಮುಕ್ತವಾಗಿ ಹಚ್ಚ ಹಸುರಿನ ಕಾಡಿನ ಮಧ್ಯೆ ಯಾರ  ಹಿಡಿತವಿಲ್ಲದೆ ಜಿಗಿಯಬೇಕಿರುವ ಜಿಂಕೆಗೆ ,ತುಂಬು ಕೊಠಡಿಯಲ್ಲಿ  ಹಾಕಿ,ಹೀಗೆ ಸಾಗು ಎಂದು ಹೇಳಿದಂತಿರುತ್ತದೆ ಈ ವಿದ್ಯಾರ್ಥಿ  ಜೀವನ.ಇದು ಇಲ್ಲಿಗೆ ಸೀಮಿತವೆ ?ಒಮ್ಮೆ ಲಗಾಮು ಹಾಕಿದ ಕುದುರೆ,ಪಂಜರಕ್ಕೊಡಿದ ಹಕ್ಕಿಯು  ಸ್ವತಂತ್ರ ಬದುಕು ಸಾಗಿಸಲು ಸಾದ್ಯವೇ ?

         ನೀವು ಗಮನಿಸಿರಬಹುದು,ಇಂಜಿನಿಯರಿಂಗ್ ಫಲಿತಾಂಶ ಹೊರ ಬಿದ್ದಾಗ ಹತ್ತಾರು ವಿದ್ಯಾರ್ಥಿಗಳು ಅತ್ಮಹತ್ಯೆಗೆ ಶರಣಾಗುವುದು ,ಈ ಮಧ್ಯೆ ತೀರ ಸಾಮಾನ್ಯವಾದ ಸುದ್ದಿ.ಆದರೆ ಸಮಾಜದ ಮಟ್ಟಿಗೆ ಇವರೆಲ್ಲ ಹೇಡಿಗಳು.ಬದುಕಿನ ತೀರ ಸಣ್ಣದಾದ ಪರೀಕ್ಷೆ ಹಾಗು ಮುಂದೆ ದೊಡ್ಡ ಪರ್ವತದಂತೆ ಬರಲಿರುವ ಪರೀಕ್ಷೆಗಳನ್ನು face  ಮಾಡಲಾಗದಿರುವ ಮುರ್ಖರು! ಹೌದು,ಈ ಮಾತು ಸರಿಯೆ,ಎಂದು ಪ್ರತಿಪಾದಿಸುವವರಿಗೆ,ನನ್ನ ಕೆಲವು ಪ್ರಶ್ನೆ. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳ ಮಾನಸಿಕ ಖಿನ್ನತೆಯ ಬಗ್ಗೆ  ನಿಮಗೆ ಅರಿವಿದೆಯೆ?ಯಾವುದೊ ಒಂದೆರಡು ವಿಷಯಗಳಲ್ಲಿ  ಫೇಲ್  ಆಗಿಬಿಟ್ಟರೆ ಹುಟ್ಟಿರುವುದೇ ದಂಡ ಎಂದು ಟೀಕಿಸುವ ಈ ಸಮಾಜದ ದೃಷ್ಟಿಕೋನವನ್ನು ಸಮರ್ಥಿಸಿಕೊಂಡು ಹೋಗುವಷ್ಟು ಬಲಿಷ್ಠ  ಮನೋಭಾವ  ಆ ಎಳೆ ಮನಸಿಗೆ ಇರಲು ಸಾಧ್ಯವೆ? ಇಂಥ ಎಷ್ಟೊ ಪರೀಕ್ಷೆಗಳನ್ನು ಎದುರಿಸಲು,ಅವರಿಗೆ ದೀರ್ಘವಾದ  ಬುನಾದಿಯ ಅಗತ್ಯವಿದೆ ಅಲ್ಲವೇ!
           ಇಂತಹ ಆಸಕ್ತಿ ಇಲ್ಲದ ಬದುಕಿಗೆ ಗುಡ್ ಬೈ  ಹೇಳಿ ಸ್ವಚ್ಚಂದವಾದ  ನೀಲಿ ಬಾನಿಗೆ ರೆಕ್ಕೆ ಒಡ್ಡಿ ಹಾರುವಷ್ಟು ಮುಕ್ತ ಸ್ವತಂತ್ರ ಬೇಕಿದೆ! ನಿಂತಲ್ಲೆ  ನಿಂತು,ಸಮಾಜದ ಕಟ್ಟುಪಾಡೆಂಬ ಕೊಳೆತ ಕೊಳದಿಂದ ಹೊರ ಬಂದು ಹರಿಯೋ ಝರಿಯಾಗುವಷ್ಟು ಸ್ವತಂತ್ರ ಬೇಕಿದೆ ! ಮುಚ್ಚು ಮರೆ ಇಲ್ಲದೆ,ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುವ ಹೂವಿನಂತಹ  ಮುಗ್ಧವಾದ ಸ್ವಾತಂತ್ರ್ಯ ಬೇಕಿದೆ!
 ಇವೆಲ್ಲ ಸಾದ್ಯವಾಗಬೇಕೆಂದರೆ, ಮನೆಯೇ  ಮೊದಲ ಪಾಠಶಾಲೆಯಾಗಬೇಕು .ಶಿಕ್ಷಣ ಇರುವುದೆ ಮುಂದೊಂದು ದಿನ ಓದಿ ಹಣ ಗಳಿಸುವುದಕ್ಕೆ ಎಂದು ಹುರಿದುಂಬಿಸುತ್ತಿರುವ ಸಮಾಜದ ಹುಚ್ಹು ಹೊಳೆಗೆ ಕಡಿವಾಣ  ಬೀಳಬೇಕು.ಕಲೆ , ಸಾಹಿತ್ಯ ,ಕ್ರೀಡೆ ಎಂಥ ವಿಷಯದಲ್ಲಿ ಆಸಕ್ತಿ ಬೆಳೆಯಬೇಕು .ಬಾವಿ  ಕಪ್ಪೆಗಳಂತೆ ಇರುವುದನ್ನು ಬಿಟ್ಟು,ಪರಿಸರದ ಚಿಕ್ಕ-ಪುಟ್ಟ, ಸೋಲು ಗೆಲುವುಗಳನ್ನು ,ಸೂಕ್ಶ್ಮವಾಗಿ  ಗ್ರಹಿಸಿ ಪಾಠ ಕಲಿತು, ಮಾನವೀಯತೆ ಮೆರೆವ  ಬದುಕನ್ನು ಆರಂಭಿಸಬೇಕಿದೆ !
ಶಿಕ್ಷಣವಷ್ಟೇ ಅಲ್ಲ ,ನಾವು ಯೋಚಿಸುತ್ತಿರುವ ರೀತಿ,ಮಾತು, ನಡವಳಿಕೆ ಇವೆಲ್ಲದರಲ್ಲಿ  ರೂಪಾಂತರದ  ಅಗತ್ಯವಿದೆ ಅಲ್ಲವೆ? ಏನಂತೀರ?

ಮೋಹಕ ನಶೆ..

                                                                      ಕವಿತೆ ಭಾವುಕರ ಭಾಷೆ
                                                  ಬಿಂಬ ಪ್ರತಿಬಿಂಬಗಳ ನಡುವೆ ಸದಿಲ್ಲದೆ
                                                  ಹರಿಯುತಿರುವ ಹೆಸರಿಲ್ಲದೊಂದು ಹೊಳೆ
                                         ಅನುಭವಕ್ಕೆ ಬಂದರೆ ಅರ್ಥವಾದೀತು ಇದರ ಮೋಹಕ ನಶೆ..



ಕಾಲ ಮುನ್ನುಗ್ಗಿದಂತೆಲ್ಲ..

ಕಾಲ ಮುನ್ನುಗ್ಗಿದಂತೆಲ್ಲಾ
ಮುಸುಕು ಮನಸಿನ ಕ್ರೌರ್ಯ ನಸುಕಿನಿಂದ ಹೊರ ಬಂದಂತಿದೆ
ಲೆಕ್ಕಕಿರದ ಒಳಿತ ಬಗೆದಿರಲಿ,
ಹರಿತ ಮಾತುಗಳ ನುಂಗಿ ಏನೂ ಅರಿಯದವರಂತಿದ್ದರೆ ಗೆದ್ದೆವು
ಧಿಕ್ಕರಿಸಿ ನಿಂತೆವೆನ್ನಿ
ದ್ವೇಷ ,ದರ್ಪಗಳ ಕೈಕೈ ಹಿಡಿದು ಊರೆಲ್ಲ ಮೆರೆವೆವು..



ಧಗೆ..

ಒಳಗೆ ಬಗೆ ಬಗೆಯ ಧಗೆ
ಮರೆಮಾಚಲು ಅರ್ಥಕ್ಕೆ ನಿಲುಕದ ನಗೆ 
ಮರುಳಾದೆ, ಮಾಸದ ಈ ನಿಗೂಢ ವರ್ತನೆಗೆ..


ಗುರುವಾರ, ಜನವರಿ 5, 2012

ನಾ ಕಂಡ ಹಾಗೆ..


 ನಾ ಕಂಡ ಹಾಗೆ ನಮ್ಮೆಲ್ಲರ ಪೋಷಕರಲ್ಲಿ ಅದೊಂದು ಹುಚ್ಚು ಹಂಬಲ ನಿರಂತರವಾಗಿ ಪುಟಿಯುತ್ತಿರುತ್ತದೆ .ತಮ್ಮ ಎಲ್ಲಾ ಆಸೆಗಳಿಗು ಪರದೆ ಎಳೆದು ,ಮಕ್ಕಳ ಚಿಗುರಿನಂತಹ ಕನಸುಗಳಿಗೆ ಸಿಬಿರಿನಂತೆಹೆ ಕಾವಲಾಗುವುದೊಂದೆ ಇವರ ಜೀವನದ ಮುಖ್ಯ ಉದ್ದೇಶವಾಗಿ ಉಳಿದುಬಿಡುತ್ತದೆ.ಯಾವೊಂದು ಗಳಿಗೆಯಲ್ಲೂ ತಾವು ಅನುಭವಿಸಿದ ಅದಾವ ಕಷ್ಟ ಪರಿಸ್ಥಿತಿಗೂ ತಮ್ಮ- ತಮ್ಮ ಮಕ್ಕಳು ಸಿಲುಕ ಬಾರದೆಂದು ಹಂಬಲಿಸಿ,ಇದನ್ನೇ ಗುರಿಯಾಗಿ ಸ್ವಿಕರಿಸಿಬಿಡುತ್ತಾರೆ.

ಆದರೆ ನನಗ್ಯಕೋ ಈ ಮದ್ಯೆ ಇವಾವ ಹಂಬಲಗಳು ದೊಡ್ಡ ಗುರಿಯಂತೆ ತೋರುತ್ತಲೇ ಇಲ್ಲ!

ಕೆಲ ಕ್ಷಣ ನಿಮ್ಮ ಮನಸ್ಸನ್ನು ಚಿಂತೆಗೆ ದೂಡಿ ಸ್ನೇಹಿತರೆ , ನಮ್ಮ ಪೋಷಕರು ನಮ್ಮೆಡೆಗೆ ತೋರುವ ಆಸಕ್ತಿ ,ಮುಂದೆಯೂ ನಿರಂತರವಾಗಿ ತೋರಬಹುದಾದ ಆ ಒಲವು ಬರಿ ನಮಗಷ್ಟೆ ಏಕೆ ಸೀಮಿತವಾಗಿರ ಬೇಕು?

ಇವರು ತೋರುವ ಆ 100% ಪ್ರೀತಿಯಲ್ಲಿ ಅದೆಷ್ಟೋ ಅನಾಥ ,ABNORMAL ಮಕ್ಕಳಿಗೆ ಒಂದು ಪಾಲು ಕೊಡಲು ನಿರ್ಧರಿಸಿದ್ದರೆ,ಅದೊಂದು ಎತ್ತರದ ಚಿಂತನೆಗೆ ವೇದಿಕೆ ಸಿದ್ದಪಡಿಸಿದಂತಾಗುತಿತ್ತು ,ಅಲ್ಲವೇ?

ಇದನ್ನೇ ಅಲ್ಲವ "broad minded thinking" ಅನ್ನೋದು ?

ಇಂತಹ ಅಸಾಧಾರಣ ತಿಳಿವಳಿಕೆಯೊಂದು ಮೂರ್ಖತನದ ಮುಸುಕಿನೊಳಗಿಂದ ಕೆಲಸ ಮಾಡಿದಾಗಲೇ ಅಲ್ಲವೆ ಒಂದಷ್ಟು ಬುದ್ದಿಜೀವಿಗಳ ವ್ಯಕ್ತಿತ್ವ Elevate ಆಗೋದು! ಏನಂತೀರ?



'ಮಾಯೆ'


ಚಿತ್ರ ಶರತ್ ಎಂ

                                                
    'ಮಾಯೆ'ಗುಂಟೆ ಕೈಕಾಲು ರೂಪ !
    ಆದರೂ ಕುಣಿಸುವುದು ಬೇಕಂತೆಯೆನ್ನ
    ಅದರದೇನು ನಿಲುವೋ ,ಹಾಸಿದ್ದರು ಮುಗಿಲೆತ್ತರ ತೆರೆಯ
    ಸರಿಸಿ ಕೇಳುವುದೆನ್ನ :'ಒಳಬರಲೇನೆ ಚಿನ್ನ'..

ಬುಧವಾರ, ಜನವರಿ 4, 2012

ಆಸೆ ನನಗೆ..

ಒಡಲಾಳದ ಆಸೆಗಳ ಬಯಲಿಗಿಟ್ಟ ಕೂಸು ನಾನು
ಒಂದಹನಿಯು ಬಿಡದೆ ,ಒಂದೊಂದನ್ನು ಹೆಕ್ಕಿ ಅನುಭವಿಸುವ ಆಸೆ ನನಗೆ..
ನಗೆಯ ಬಿಡಿ ಹೂವ ಮುಡಿದು ಸಾಗಿರುವೆ ನಾನು
ನಗು ಬಾಡದಿರಲಿ ,ಅಳು ಬಾರದಿರಲೆಂಬ ಅಸ್ವಾಭಾವಿಕ ಆಸೆ ನನಗೆ..


ನೆನಪು..

                          ಬಂದು ಹೋಗುತಿಹುದಿಂದು ಮಳೆಬಿಲ್ಲ ನೆನಪು ,ಬಿತ್ತಿ ನೂರು ಆಸೆ ಮಾಯೆ ಈಗೆಲ್ಲಿ ಇಹುದೊ...


ದನಿ ಎಲ್ಲ ನಾದವೆ ..


                                                         ದನಿ ಎಲ್ಲ ನಾದವೆ
                                                         ನೋಟವೆಲ್ಲ ಹೂಹಾದಿಯೆ
                                                         ಬಳ್ಳಿಯಲ್ಲಿ ಬರಿ ಮೊಗ್ಗೇ ಹಿಗ್ಗಿ,
                                                         ಹಗಲಲ್ಲು ಚಂದ್ರೋದಯವೆ...
                                                         ಒಲವೊಂದು ಸುರಿದಾಗ,ಕನಸೊಂದು ಪುಟಿದಾಗ !
                                                         ಮಾತು ಬರಿದಾದ ಮೌನವೆ
                                                         ಹಗಲು ಕವಿದ ಕತ್ತಲೆಯೆ
                                                         ತಾರೆಗಳನೆಲ್ಲ ಅಟ್ಟಿ,
                                                         ಇರುಳೆಲ್ಲ ಬರಿ ಬೆಳದಿಂಗಳ ಚಿತೆಯೆ...
                                                         ಒಲವೊಂದು ಹರಿದಾಗ,ಕನಸೊಂದು ಮಡಿದಾಗ !
                                                  

ನೋಡಿ ..


                                                           ಬೆಳಗಿನ ನೀಲಿ Uniform ಕಳೆಚಿ
                                                                   ಕರಿಯ ರಗ್ಗು ಹೊದ್ದು
                                                    ಗುಡುಗು ಸಿಡಿಲ ಗೊರಕೆ ಹೊಡೆಯುತಿಹನು
                                                               ನೋಡಿ,ಕಾಲಚಕ್ರ ಮೊಗೆಚಿ ..