ಸೋಮವಾರ, ಜುಲೈ 9, 2012

ಮನಸ್ವಿಯ ಮಾತು..

ದೂಡಿ ಇವನತ್ತ ನನ್ನನಾಗಸಕ್ಕೆ
ಕಾದು ಕೂರೆ ನಿಶ್ಚಲ ನೀಲ ಕನ್ಯೆಯೇ
ಬಂದು ಹೇಳುವುದಿದೆ ಬಿಡಿಸಿ ನಿನಗೆ
ನಾ ಕಂಡ ಹೊನ್ನ ಪಲ್ಲಕ್ಕಿಯ ತೇರು ಇವನ ಕಣ್ಣಿನೊಳಗೆ

ಮಾತಿಗಿಳಿದು ವಿನಯ ಮೀರಿ ನಿಟ್ಟಿಸುತಿರೆ ನಯನ

ನಿಷಿದ್ಧ ನಿಶೆಯಲೇ ಬಿಡಿ ಮುತ್ತ ಒತ್ತಿಡುವಾಸೆ
ತಿರುಗಿ ಗೀಚೆ ಕದಲುವನೇನೋ ,ನಿಜ ಒಲುಮೆಯಲಿ
ಕೆನ್ನೆ ತುಂಬಾ ಕೆಂಬಣ್ಣ
ಈ ..
ಚೆಂದ ಬಣ್ಣಗಾರ !

ಇದೆಂಥಾ ಹಬ್ಬವೋ ಮನಸ್ವಿಯಂತಿದ್ದ ನನ್ನಲಿ
ಮನ್ವಂತರದ ರಂಗು ರಂಗೋಲಿ ಮೈಯಲಿ
ಚಿಗುರೆಲೆ ತೋರಣ ಕಿರು ದೀಪ ಕೈಹಿಡಿದ ಸಂಭ್ರಮದಿ
ಇಗೋ ತಂದಿಹೆನು ಬೊಗಸೆ ಮಲ್ಲಿಗೆ ಇಬ್ಬನಿ ಗಂಧ ಉಡುಗೊರೆಯಲಿ

ಬಟ್ಟೆ ತುಂಬಾ ಚಿಟ್ಟೆ ರಾಶಿ
ನಲಿವ ಬಣ್ಣಿಸ ಬೇಕೆ ?
ಹನಿಗವನ ಮಹಾಕಾವ್ಯವೇ ಆದೀತು
ದೂಡಿ ಇವನತ್ತ ನನ್ನನಾಗಸಕ್ಕೆ
ಕಾದು ಕೂರೆ ಕೃಷ್ಣ ಕನ್ಯೆಯೇ
ಬಂದು ಹೇಳುವುದಿದೆ ಬಿಡಿಸೆಲ್ಲವ ನಿನಗೆ
ಮನ್ಮಥನಾಡಿದ ಮಂಥನ ಮಾಯೆ !