ಶನಿವಾರ, ಜನವರಿ 14, 2012

೧. ನಾವು ಕಲಿಯುತ್ತಿರುವ ಶಿಕ್ಷಣ ನಮ್ಮ ಬದುಕಿಗೆ ಪೂರಕವಾಗಿದಿಯೇ ?
ಶಿಕ್ಷಣ ಎಂಥದೇ ಇರಲಿ ,ಕಲಿಕೆ ಮತ್ತು ಗ್ರಹಿಕೆಯ ಗುಣಮಟ್ಟ ಶ್ರೇಷ್ಠವಾಗಿರಬೇಕು .ಶಿಕ್ಷಣ ತಾತ್ಕಾಲಿಕ ಜ್ಞಾನವಲ್ಲ ,ಅದು ಜೀವಿಯಿಂದ ಜೀವಿಗೆ ಜೀವನವನ್ನೇ ವರ್ಗಾಹಿಸುವಂತಹದು.ಬಹುಷಃ ಇಂದು ಶಿಕ್ಷಣ ತನ್ನ ಮುಲ್ಯಗಳನ್ನು ಕಳೆಚಿ ಅರೆ ಬೆತ್ತಲೆ ನಿಂತಂತೆ ಭಾಸವಾಗುತ್ತಿದೆ.ಗಂಟೆಹಿಂದೆ ಓದಿದ್ದನ್ನ ಮತ್ತೊಂದು ಗಂಟೆಕೂತು ಕಕ್ಕುವುದಷ್ಟೇ ಇವತ್ತಿನ ಶಿಕ್ಷಣ ವ್ಯವಸ್ಥೆ ,ಹೀಗಿರುವಾಗ ಜ್ಞಾನಾರ್ಜನೆ ಹೇಗೆ ಸಾದ್ಯ!

ಹೇಳಿದ್ದೇ ಹೇಳುವರು ,ಕೇಳಿದ್ದೇ ಕೇಳುವರು
ಕೇಳಿದ್ದೇ ಕೇಳಿ ಸುಖಿಸುವರು ಜ್ಞಾನಿ
ಗಳ ಮಾರ್ಗವೇ ಬೇರೆ ಸರ್ವಜ್ಞ..

ಸರ್ವ ಜ್ಞಾನಿಯ ಈ ನುಡಿಮುತ್ತು ಸಾಕು ಇಂದಿನ ಶಿಕ್ಷಣದ ರೂಪು ರೇಖೆಯನ್ನು ತೂಗಿ ನೋಡಲು.
ಶಿಕ್ಷಣ ಎಂದಿಗೂ ಒಬ್ಬ ಮಾಮೂಲಿ ಮನುಷ್ಯನನ್ನು ಪ್ರಬುಧ್ಧ ವ್ಯಕ್ತಿಯನ್ನಾಗಿಸುವ ಚಟುವಟಿಕೆಯಂತಿರಬೇಕು ,ಮುಂದೆ ಬದುಕ ಮಹಡಿ ಕಟ್ಟುವ ಸ್ವಪ್ನದಲ್ಲಿರುವವನಿಗೆ ಪೂರಕ ಗುಣಮಟ್ಟದ ಇಟ್ಟಿಗೆ ,ನೀರು,ಸಿಮೆಂಟು ಒದಗಿಸಿ ತನ್ನ ಇಷ್ಟಾರ್ತದಂತೆ ಕಟ್ಟಡ ನಿರ್ಮಿಸುವ ದಿಕ್ಕಸೂಚಿಯಾಗಬೇಕು.ಆದ್ದರಿಂದು ಶಿಕ್ಷಣ ದುಡ್ಡಿನ ಮಹಾಮಳೆಯಡಿ ಸಮಯದ ಜೋರು ಪ್ರವಾಹಕ್ಕೆ ಸಿಕ್ಕ ಸಣ್ಣ ಹಾಯಿ ದೋಣಿಯಂತಾಗಿದೆ.ಹೀಗಿರುವಾಗ ಬೆಳವಣಿಗೆ ಹೇಗೆ ಸಾದ್ಯ!

ಮಹಾನ್ ತಪಸ್ವಿಯಂತೆ ಸುಧೀರ್ಗ ವರ್ಷಗಳ ಅಭ್ಯಾಸದ ನಂತರ ಕೊನೆಗೊಂದು ದಿನ ತನ್ನ ಕಲಿಕೆಗಿಂದು ಕೊನೆ ಎಂದು ಹೊರ ದೌಡಾಯಿಸುವ ವಿಧ್ಯಾರ್ಥಿಯ ಕೈಯಲ್ಲಿ ಪದವಿ ಪತ್ರ ಬಿಟ್ಟರೆ ಕನಿಷ್ಠ ಒಂದಾದರು ವಿಷಯದಲ್ಲಿ  ಪಾಂಡಿತ್ಯವಿರದ ಡೊಳ್ಳು ತಲೆ..ಹೋಗಲಿ ಒಂದಿಷ್ಟು ಮಾನವೀಯತೆ ,ಶೃಜನಶೀಲತೆ,ನೈತಿಕಯ ಸೊಬಗಾದರು ಬೇಡವೇ ?ಎಲ್ಲೋ ಬೆರಳೆಣಿಕೆಯ ಜನಕಷ್ಟೆ..ಇಂದಿನ ಈ ಪರಿಸ್ತಿತಿಗೆ ಕಾರಣ ,ಶಿಕ್ಷಣವೆಂದರೆ ಯುದ್ಧದಂತಾಗಿರುವುದು .ಶಿಕ್ಷಣ ದುಡಿಮೆ ಅಥವ ಭೋಗದ ವಸ್ತುವಲ್ಲ, ಅದೊಂದು ನಿರಂತರ ನಿಟ್ಟುಸಿರಿನವರೆಗೂ ಕಾಲದ ಪರಿವಿಲ್ಲದೆ ಬದುಕ ಹೆಣೆಯುವ ಕಲೆ.ಬರೀ ಪದ್ಧತಿ ,ಬಂಧನ ಮತ್ತು ಆಡಳಿತಕ್ಕೆ ಸೀಮಿತವಾಗಿರುವ ಇಂದಿನ ಶಿಕ್ಷಣ ಮುಂದಿನ ಬದುಕಿಗೆ ಪೂರಕವೇ ಅಲ್ಲಾ.

ಚಿಂತಕರ ಪ್ರಕಾರ ಸಮಾಜ ಸೇವೆ ,ಸ್ವಇಚ್ಚಿತ ಜವಾಬ್ದಾರಿ,ಸದ್ ವರ್ತನೆ ,ಸತ್ ಚಿಂತನೆಗಳಂತಹ ಕಾರ್ಯ ಯುವ ಪ್ರಜೆಗಳಿಗೆ ಹೆಚ್ಚು ವೈಭವಿಕರಿಸುತ್ತದೆ .ಚಿಂತನೆಯಲ್ಲಿ ಅಂಥ ದೊಡ್ಡ ಲೋಪ ದೋಷಗಳೇನು ಇಲ್ಲ ,ಉರಿಯುವ ಮೇಣದ ಬತ್ತಿಯೊಂದೆ ಉಳಿದ ಮೇಣದ ಬತ್ತಿಗಳನ್ನು ಉರಿಯುವಂತೆ ಮಾಡಬಲ್ಲದಲ್ಲವೇ ? ಹಾಗಂತ ಧಂಗೆ ಎದ್ದು ,ಹೋರಾಟಕ್ಕಿಳಿದು ,ಚಳುವಳಿ ಕೂಗಬೇಕಂತೆನಿಲ್ಲ.ನಮ್ಮ ನಮ್ಮ ಯೋಚನಾ ಲಹರಿಯನ್ನು ಸ್ವಲ್ಪ ತೀವ್ರವಾಗಿಸಬೇಕಷ್ಟೇ , ಜಗತ್ತಿನ ಪ್ರತಿ ಶೃಷ್ಟಿಗು ಪಕ್ಷಪಾತರಹಿತವಾದ ಬಾಳ್ವೆಗೆ ಅವಕಾಶವಿದೆ ಎಂಬುದ ತಿಳಿದು ,ಪರಿಸರದ ಕುರಿತು ಒಂದಷ್ಟು ಜಾಗೃತಭಾವ,ಸರ್ವರಿಗೂ ಸಮಬಾಳು –ಸರ್ವರಿಗೂ ಸಮಪಾಲು ಎಂಬ ಚಿಂತಾಕ್ರಾಂತಿ ಇದ್ದರಷ್ಟೇ ಸಾಕು ಇಂದು ಚಾಲನೆಯಲ್ಲಿರುವ ಬಹುತೇಕ ಕಿವುಡು ಸಮಸ್ಯೆಗಳು ಬಗೆಹರಿದಂತೆಯೇ !
ಜಿ ಎಸ್ ಶಿವರುದ್ರಪ್ಪನವರ ಚಂದದ ಸಾಲುಗಳು ,

ಅದೂ ಬೇಕು ಇದೂ ಬೇಕು ,ದಾರಿ ನೂರಾರಿವೆ ಬೆಳಕಿನರಮನೆಗೆ!
ನೂರಾರು ಭಾವದ ಭಾವಿ ,ತೋಡಿಕೊ ನಿನಗೆ ಬೇಕಾದಷ್ಟು ಸಿಹಿನೀರು
ಪಾತ್ರೆಯಾಕಾರಗಳ ಕುರಿತು ಜಗಳವೇಕೆ !

ನಮ್ಮಿಂದ ಸಮಾಜದ ನಿರ್ಮಾಣ ಎಂಬ ಸಣ್ಣ ಸತ್ಯ ಪ್ರಜ್ಞಾವಂತ ಯುವಜನಾಂಗದ ಪೂರ್ವಸಿದ್ಧ ಆಲೋಚನೆಯಾಗಬೇಕು . ಜವಾಬ್ದಾರಿಗಳಲ್ಲಿ ಅತಿ ಶ್ರೇಷ್ಠವಾದದ್ದೆಂದರೆ ಶಿಕ್ಷಣ ಧರ್ಮವೆಂಬುದ ಅರಿತು ,ತಮಗೆ ತಿಳಿದದ್ದನು ಸಮಾಜಕ್ಕೆ ಧಾರೆ ಎರೆಯುವುದೇ ಯುವಜನಾಂಗದ ಮುಖ್ಯ ಕರ್ತವ್ಯವಾಗಬೇಕು .ಉಪನಿಷತ್ತಿನ ಪ್ರಕಾರ ‘ಪತಿತಂ ,ಪತಂತಂ ,ಪತಶ್ಯಂತಂ,ಉದ್ಧರೇತ್ ಧರ್ಮಃ ‘ಅಂದರೆ ಬಿದ್ದಿರುವವನು ,ಬೀಳುತ್ತಿರುವವನು,ಮುಂದೆ ಬೀಳಲಿರುವವನು ,ಇವರನ್ನು ಉದ್ಧಾರ ಮಾಡುವುದೇ ಧರ್ಮ . ಜಾಗೃತ ಮನಸುಳ್ಳ ,ಸುಉದ್ದೇಶಕ್ಕೆಂದು ಹೊರಟ ಯುವಜನಾಂಗಕ್ಕೆ ಮಹಾಕವಿಯು  ಕವಿವಾಣಿಯನ್ನೇ ಹಾಡಿದರು ,


ನಡೆಮುಂದೆ ನಡೆಮುಂದೆ          

ನುಗ್ಗಿನಡೆ ಮುಂದೆ

ಜಗ್ಗದೆಯೇ ಕುಗ್ಗದೆಯೇ

ಹಿಗ್ಗಿನಡೆ ಮುಂದೆ.. 


ಸಮಾಜಸೇವೆ ,ಸಾಮಾಜಿಕ ಕಳಕಳಿಗಳಂತಹ ಜವಾಬ್ದಾರಿಗಳನ್ನು ಹೊರ ಬಯಸುವವನಿಗೆ ಮೊದಲು ಆತ್ಮವಿಶ್ಲೇಷಣೆ ಬೇಕು ,ಯುವ ಪ್ರತಿಭೆಗಳಿಗೆ ಮೊದಲು ತಮ್ಮ ತಮ್ಮ ಅವಶ್ಯಕತೆಗಳ ಅರಿವಿರಬೇಕು ,ಮುಂದಾಳತ್ವದ ಮುನ್ನೋಟವಿರುವವನಿಗೆ ತನ್ನ ಅವಶ್ಯಕತೆಗಳ ಅರಿವಿಲ್ಲದಿದ್ದರೆ ಹೇಗೆ ?necessity is the mother of invention ‘ಅವಶ್ಯಕತೆಯೇ  ಅನ್ವೇಷಣೆಯ ತಾಯಿ ‘.

ಶಿಕ್ಷಣ ಜೀವನದ ಗುರಿಯಲ್ಲಾ ದಾರಿಯಾಗಬೇಕು ,’ಜ್ಞಾನಕ್ಕಾಗಿ ಜ್ಞಾನ’ ಎನ್ನುವುದು ವ್ಯಕ್ತಿಗುಣವಾಗಬೇಕು ,’ಜೀವನಕ್ಕಾಗಿ ಶಿಕ್ಷಣವಲ್ಲ ಜೀವನದ ಮುಖಾಂತರ ಶಿಕ್ಷಣ’ ಎಂತಾದಾಗಷ್ಟೇ ಶಿಕ್ಷಣದ ವಿಶಾಲಾರ್ಥ ತಿಳಿದು ಕಲಿತಿರುವುದು\ಕಲಿಯುತ್ತಿರುವ ವಿದ್ಯೆ ಬದುಕಿಗೆ ಪೂರಕವಾಗಬಹುದು !






1 ಕಾಮೆಂಟ್‌: