ಭಾನುವಾರ, ಜನವರಿ 8, 2012

ಬದಲಾದ ಜಗದೊಟ್ಟಿಗೆ ಹದಗೆಟ್ಟಿದ ಬದುಕು..

(ನನ್ನ ಮೊದಲ ಲೇಖನ)

 ಜಗದ  ಪ್ರತಿ  ಸೃಷ್ಟಿಗೂ ತನ್ನದೇ ಆದ ಕೆಲ ಕಟ್ಟುಪಾಡುಗಳಿವೆ. ಹರಿಯೋ ಝರಿ,ಹಾರೋ ಹಕ್ಕಿ ,ಸೊಂಪಾಗಿ ಹೂ ಬಿರಿದು ನಗೋ  ಬಳ್ಳಿ ಮೇಲ್ನೋಟಕ್ಕೆ ನಮಗೆ ಹಾಯಾಗಿ ಕಂಡರೂ , ಅವರ ಚಿಂತೆಯ  ಬಳುವಳಿಯ  ಬುತ್ತಿಯನ್ನು ಬಿಚ್ಚಿಡಲು ಯಾರಿಗೆ ಸಾಧ್ಯ ! ಆದರೂ  ಅವರಿಗೆ ಯಾರ ಹಂಗೂ  ಬೇಕಿಲ್ಲ,ಸೃಷ್ಟಿಯು ಇವರಿಗೊಡ್ಡಿರುವ ಆದಿ ಅಂತ್ಯಗಳಷ್ಟೇ ಲಗಾಮು .
ಆದರೆ ಯಾಕೋ ಮನುಕುಲ ಇವೆಲ್ಲಕಿಂತ ತೀರ ತುಚ್ಹ  ಮಟ್ಟದ ಪರಿಸ್ಥಿತಿಗೆ ಬಂದಿಳಿದಿದೆ .ತಾಯಿಯೇ ಮೊದಲ ಗುರು ಎಂದು ಕೇಳಿದ್ದಿವಿ ,ಆದರೆ ಇಂದಿನ ಸಮಾಜದಲ್ಲಿ ತಾಯಿಯರು  ಕೂಡ  modern ಆಗಿ ಬದಲಾಗಿದ್ದಾರೆ !ಮಗು ಮಾತು ಕಲಿಯಲು ಆರಂಭಿಸಿತೆಂದರೆ ಸಾಕು A B C D ಯನ್ನು Z  ವರೆಗೆ ಕಲಿಸಿ,ಶಾಲೆಗೆ ದಬ್ಬುತ್ತಾರೆ.ಇಲ್ಲಿಂದ ಪ್ರಾರಂಭವಾಗುತ್ತೆ ಸುಧೀರ್ಘವಾದ 18 ವರ್ಷಗಳ ಕಾರಾಗೃಹವಾಸ .ಮುಕ್ತವಾಗಿ ಹಚ್ಚ ಹಸುರಿನ ಕಾಡಿನ ಮಧ್ಯೆ ಯಾರ  ಹಿಡಿತವಿಲ್ಲದೆ ಜಿಗಿಯಬೇಕಿರುವ ಜಿಂಕೆಗೆ ,ತುಂಬು ಕೊಠಡಿಯಲ್ಲಿ  ಹಾಕಿ,ಹೀಗೆ ಸಾಗು ಎಂದು ಹೇಳಿದಂತಿರುತ್ತದೆ ಈ ವಿದ್ಯಾರ್ಥಿ  ಜೀವನ.ಇದು ಇಲ್ಲಿಗೆ ಸೀಮಿತವೆ ?ಒಮ್ಮೆ ಲಗಾಮು ಹಾಕಿದ ಕುದುರೆ,ಪಂಜರಕ್ಕೊಡಿದ ಹಕ್ಕಿಯು  ಸ್ವತಂತ್ರ ಬದುಕು ಸಾಗಿಸಲು ಸಾದ್ಯವೇ ?

         ನೀವು ಗಮನಿಸಿರಬಹುದು,ಇಂಜಿನಿಯರಿಂಗ್ ಫಲಿತಾಂಶ ಹೊರ ಬಿದ್ದಾಗ ಹತ್ತಾರು ವಿದ್ಯಾರ್ಥಿಗಳು ಅತ್ಮಹತ್ಯೆಗೆ ಶರಣಾಗುವುದು ,ಈ ಮಧ್ಯೆ ತೀರ ಸಾಮಾನ್ಯವಾದ ಸುದ್ದಿ.ಆದರೆ ಸಮಾಜದ ಮಟ್ಟಿಗೆ ಇವರೆಲ್ಲ ಹೇಡಿಗಳು.ಬದುಕಿನ ತೀರ ಸಣ್ಣದಾದ ಪರೀಕ್ಷೆ ಹಾಗು ಮುಂದೆ ದೊಡ್ಡ ಪರ್ವತದಂತೆ ಬರಲಿರುವ ಪರೀಕ್ಷೆಗಳನ್ನು face  ಮಾಡಲಾಗದಿರುವ ಮುರ್ಖರು! ಹೌದು,ಈ ಮಾತು ಸರಿಯೆ,ಎಂದು ಪ್ರತಿಪಾದಿಸುವವರಿಗೆ,ನನ್ನ ಕೆಲವು ಪ್ರಶ್ನೆ. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳ ಮಾನಸಿಕ ಖಿನ್ನತೆಯ ಬಗ್ಗೆ  ನಿಮಗೆ ಅರಿವಿದೆಯೆ?ಯಾವುದೊ ಒಂದೆರಡು ವಿಷಯಗಳಲ್ಲಿ  ಫೇಲ್  ಆಗಿಬಿಟ್ಟರೆ ಹುಟ್ಟಿರುವುದೇ ದಂಡ ಎಂದು ಟೀಕಿಸುವ ಈ ಸಮಾಜದ ದೃಷ್ಟಿಕೋನವನ್ನು ಸಮರ್ಥಿಸಿಕೊಂಡು ಹೋಗುವಷ್ಟು ಬಲಿಷ್ಠ  ಮನೋಭಾವ  ಆ ಎಳೆ ಮನಸಿಗೆ ಇರಲು ಸಾಧ್ಯವೆ? ಇಂಥ ಎಷ್ಟೊ ಪರೀಕ್ಷೆಗಳನ್ನು ಎದುರಿಸಲು,ಅವರಿಗೆ ದೀರ್ಘವಾದ  ಬುನಾದಿಯ ಅಗತ್ಯವಿದೆ ಅಲ್ಲವೇ!
           ಇಂತಹ ಆಸಕ್ತಿ ಇಲ್ಲದ ಬದುಕಿಗೆ ಗುಡ್ ಬೈ  ಹೇಳಿ ಸ್ವಚ್ಚಂದವಾದ  ನೀಲಿ ಬಾನಿಗೆ ರೆಕ್ಕೆ ಒಡ್ಡಿ ಹಾರುವಷ್ಟು ಮುಕ್ತ ಸ್ವತಂತ್ರ ಬೇಕಿದೆ! ನಿಂತಲ್ಲೆ  ನಿಂತು,ಸಮಾಜದ ಕಟ್ಟುಪಾಡೆಂಬ ಕೊಳೆತ ಕೊಳದಿಂದ ಹೊರ ಬಂದು ಹರಿಯೋ ಝರಿಯಾಗುವಷ್ಟು ಸ್ವತಂತ್ರ ಬೇಕಿದೆ ! ಮುಚ್ಚು ಮರೆ ಇಲ್ಲದೆ,ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುವ ಹೂವಿನಂತಹ  ಮುಗ್ಧವಾದ ಸ್ವಾತಂತ್ರ್ಯ ಬೇಕಿದೆ!
 ಇವೆಲ್ಲ ಸಾದ್ಯವಾಗಬೇಕೆಂದರೆ, ಮನೆಯೇ  ಮೊದಲ ಪಾಠಶಾಲೆಯಾಗಬೇಕು .ಶಿಕ್ಷಣ ಇರುವುದೆ ಮುಂದೊಂದು ದಿನ ಓದಿ ಹಣ ಗಳಿಸುವುದಕ್ಕೆ ಎಂದು ಹುರಿದುಂಬಿಸುತ್ತಿರುವ ಸಮಾಜದ ಹುಚ್ಹು ಹೊಳೆಗೆ ಕಡಿವಾಣ  ಬೀಳಬೇಕು.ಕಲೆ , ಸಾಹಿತ್ಯ ,ಕ್ರೀಡೆ ಎಂಥ ವಿಷಯದಲ್ಲಿ ಆಸಕ್ತಿ ಬೆಳೆಯಬೇಕು .ಬಾವಿ  ಕಪ್ಪೆಗಳಂತೆ ಇರುವುದನ್ನು ಬಿಟ್ಟು,ಪರಿಸರದ ಚಿಕ್ಕ-ಪುಟ್ಟ, ಸೋಲು ಗೆಲುವುಗಳನ್ನು ,ಸೂಕ್ಶ್ಮವಾಗಿ  ಗ್ರಹಿಸಿ ಪಾಠ ಕಲಿತು, ಮಾನವೀಯತೆ ಮೆರೆವ  ಬದುಕನ್ನು ಆರಂಭಿಸಬೇಕಿದೆ !
ಶಿಕ್ಷಣವಷ್ಟೇ ಅಲ್ಲ ,ನಾವು ಯೋಚಿಸುತ್ತಿರುವ ರೀತಿ,ಮಾತು, ನಡವಳಿಕೆ ಇವೆಲ್ಲದರಲ್ಲಿ  ರೂಪಾಂತರದ  ಅಗತ್ಯವಿದೆ ಅಲ್ಲವೆ? ಏನಂತೀರ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ