ಶುಕ್ರವಾರ, ಡಿಸೆಂಬರ್ 23, 2011

ಬೆಳಕೆ ರೂಪಿಸುತಿದೆ ನಿನ್ನ..

ಚಿತ್ರ ವಿನಾಯಕ್ ಹೆಗಡೆ

ಬೆಳಕೆ    
ರೂಪಿಸುತಿದೆ ನಿನ್ನ ಸಹನೆ ಕವಿತೆಯೊಂದ ಎದೆಯಲಿ | |
ನಿನ್ನಯ ಮೌನ ನನ್ನೆದೆಯ ಆತ್ಮದಲಿ ಪ್ರತಿಧ್ವನಿಸಿ..

ಮೀರಿದ ಆಸೆ ಉಂಟು ನಿನ್ನಲಿ
ಬಿಟ್ಟರೆ ಸುಡಬಲ್ಲೆ ಮನೆಯನ್ನೆ ಕ್ಷಣದಲ್ಲಿ
ಆದರೂ ಕನಿಕರತೆಯ ಕಡಲುಕ್ಕಿ ಹರಿಸುತಿಹೆ,ಅದಾರಿಗಾಗಿಯೋ?
| | ಬೆಳಕೆ ,ರೂಪಿಸುತಿದೆ..                                 

ತಿರುತಿರುಗಿ ಕಾಡುವ ಗಾಳಿಯ ಗದರಿಸಿ
ಹಿಡಿ ಕತ್ತಲ ನುಂಗಿ ಹದರುತಿರುವೆ
ಆದರೂ ಗಾಂಭಿರ್ಯದ ಶ್ರುತಿ ಹಿಡಿದು ಉರಿಯುತಿರುವೆ ,ಅದಾರಸಂಕಲ್ಪಕೋ ?
| | ಬೆಳಕೆ ,ರೂಪಿಸುತಿದೆ..

ನೀ ಸತ್ತರೆ ಅಳುವರಾರಿಲ್ಲ ಇಲ್ಲಿ
ನಾವ್ ಸತ್ತರೆ ನೀನೆ ಬೇಕಂತೆ ಸೂತಕದ ಕೋಣೆಯಲಿ
ಕಾಡದಿರುವುದೇ ಇಂಥ ನಿರುತ್ತರದ ಪ್ರಶ್ನೆಗಳು ನಿನ್ನಲಿ !?
ಆದರೂ ಮೌನದಲಿ ಮೈಮರೆತು ಮಿನುಗುತಿಹೆ ,ಅದಾರುದ್ಧಾರಕೋ?

ಬೆಳಕೆ,
‘ರೂಪಿಸಿದೆ’ ನಿನ್ನ ಸಹನೆ ಕವಿತೆಯೊಂದ ಎದೆಯಲಿ
ನಿನ್ನಯ ಮೌನ ನನ್ನೆದೆಯ ತುಂಬಾ ಪ್ರತಿಧ್ವನಿಸಿ ..

ಕಲಿಸೇ ತಾಯಿ ಈ ನಿನ್ನೆಲ್ಲ ಕಲೆಯ
ಬಿಡಿಸಿ ಬರಬಲ್ಲೆ ಬಿಗಿದೆಲ್ಲ ಸೆಲೆಯ
ಕನಿಕರತೆಯ ಕಡಲಿನೊಳ್ ಮಿಂದು ,ಗಾಂಭಿರ್ಯದ ಗರಡಿಯೊಳ್ ಪಳಗಿಸಿ
ಮೌನದಲಿ ದಹಿಸುವುದ ಕಲಿಸು ತಾಯೆ
ಬಿಡಿಸಿ ಬಂದಿಹೆನು ಬಿಗಿದೆಲ್ಲ ಸೆಲೆಯ..

ರೂಪಿಸಿದೆ ನಿನ್ನ ಸಹನೆ ಕವಿತೆಯೊಂದ ಎದೆಯಲಿ
ನಿನ್ನಯ ಮೌನ ನನ್ನೆದೆಯ ಆತ್ಮದಲಿ ಪ್ರತಿಧ್ವನಿಸಿ..    
                              

1 ಕಾಮೆಂಟ್‌: