ಶುಕ್ರವಾರ, ಸೆಪ್ಟೆಂಬರ್ 5, 2014

ತುಕಡಿ ..

ಚುರುಕು ಹೆಣ್ಣು ಆಕೆ,ನನ್ನಕನಸಿನಾಕೆ
ಒಲಿದರೆ ಹೊತ್ತೊಯ್ದುದು ಮುಸುರೆ ತಿಕ್ಕಲಿಡುವನು ಎಂದಳು 
ಸಲಹೆ ಕೇಳಿದಕ್ಕೆ.
*
ಪ್ರಶ್ನೆ ಕೇಳಿ 
ಅವನ ಉತ್ತರವಷ್ಟೇ ಮರುಜೀವ ನನಗೆ ಎಂಬಂತೆ ದಿಟ್ಟಿಸಿದೆ
ಬೇರೊಬ್ಬಳ ಜಡೆ ಸಂದು ನೋಡುತ್ತಾ ,ಹೋ ಎಂದವನ
ಅಷ್ಟೇ ಸಲೀಸಾಗಿ ಪ್ರಶ್ನೇ ನಿನಗಲ್ಲಾ ಎಂದೇ. 
*
ಉಗಿಯುತ್ತಿದೆ ಬೆತ್ತಲಾಗಿಸಿ
ಬಾಯ ಹೊಲಸ ಮಾಡದೆ 
ತೃಪ್ತಿ ತಾನೇ ಪಡೆದುಕೊಳ್ಳುತ್ತಿದೆ
ಅತೃಪ್ತಿಯ ಜಗಿಯುತ್ತಲಿ
ನನ್ನೊಳಗಿನ ಜೀವ ಕ್ರಿಯೇ ಇದು ಎಂದರೆ
ಇನ್ನೂ ಮುದ್ದಾದ ಹೆಸರಿಟ್ಟು ಇದನೆಲ್ಲಾ ಕವನಾವತಾರ ಎನ್ವರಲ್ಲೇ !
*

ಲುಪ್ತ ಮನಸ್ಸ ಹಾಗೆ ತೇಲಿಸಿಬಿಡುವ ಶಕ್ತಿ ಉಂಟು ಏಕಾಂತಕ್ಕೆ
ಮಾನುಷ್ಯ ಮುಖಗಳಿರುವುದಿಲ್ಲಾ,
ಗೋಜು ಗಲೀಜುಗಳ ಸುಳಿವೂ ಸಿಗುವುದಿಲ್ಲಾ
ನಿರ್ವಾಣ ಭಾವವದು, ನಿರಾಕರಿಸಲು ಮನಸ್ಸೊಪ್ಪದು..
*
ಬಿಸಾಡಿದ್ದನೆಲ್ಲಾ ಬಾಚಿ ತಿಂದೆ 
ಗೌರವವಿರಲಿ,ಅರೆಹೊಟ್ಟೆಯು ತುಂಬಲಿಲ್ಲಾ
ತಪ್ಪು ಅವನದಲ್ಲಾ
ರುಚಿ ಹಿಡಿಸಿದ್ದೆಲ್ಲಾ ಹೊಟ್ಟೆಗಿಳಿದು ಜೀರ್ಣವಾಗಿ
ನರನರವನೆಲ್ಲಾ ಸೇರಿ ಧಮನಿಗಿಳಿದು 
ಬಡಿತವಾದೀತು ಎಂದು ನಂಬಿದ್ದು ನಾನು!

*
ಅದೆಷ್ಟು ಅರಿವಿನ ಸಂಜೆ ಕಳೆದಿದ್ದೇನೆ ಅವನೊಟ್ಟಿಗೆ
ಶಬ್ದವಿರಲಿಲ್ಲಾ ,ಮೌನ ಲಹರಿಯದು 
ದೊಂಬರಾಟವಿರಲಿಲ್ಲಾ , ಧ್ಯಾನಗ್ರಸ್ಥ ನಡಿಗೆಯದು 
ಶೋಕಿಯಾಟವಿರಲಿಲ್ಲಾ , ಮರಂದ ನಗುವದು
ಬೇಡಿಕೆಗಳಿರಲಿಲ್ಲಾ ,ಹಗಲುಗನಸಿನ ಹುಡುಗನಿವನೆಂದು ನನಗು ತಿಳಿದಿತ್ತು
ಕಳೆಯಲಿದ್ದೇನೆ ಇನೆಲ್ಲಾ ಸಂಜೆ ಅವನಿಗರಿವಿಲ್ಲದೆಯೇ ಅವನೋಟ್ಟಿಗೆ, ಹೀಗೆ...

*
ಕೇಳಿದ್ದಾದರು ಏನನ್ನು !
ಅವನ ಪಾಲಿನ ನಗು ,ಉತ್ಕರ್ಷ, ಹೊನಲು 
ನನಗವನು ಕೊಟ್ಟಿದು
ನನ್ನದಲ್ಲದ ನಿಟ್ಟುಸಿರು,ಉಮ್ಮಳ,ಹೊಲಸಿನವಳು ಎಂಬ ಹಣೆ ಪಟ್ಟಿ.

* 
ಆಸೆಗಳಷ್ಟು ಜರ್ರನೆ ನೆಲ ಉರುಳುವಾಗ 
ಅವಳಿಗಾದ ಹಾನಿ ಎಷ್ಟೋ ಅನಾಹುತಗಳೆಷ್ಟೋ
ಮಡಿದ ಕ್ರೌರ್ಯಗಳು ಮಸಣ ಸೇರಲಿ ಹೀಗೆ 
ಹೂ ಮಾಲೆ ಹುಡುಕುವ ಬನ್ನಿ ,ಭೂ ತಾಯಿಗೊಂದಿಷ್ಟು ಹಿತವೆನಿಸಬಾರದೆ ..

*
ಪ್ರೀತಿಯೆಡೆಗೆ
ಬದುಕಿನ ನಿರಂತರ ಅನ್ವೇಷಣೆ
ಇದುವರೆಗೂ ದಕ್ಕದ್ದು ಮುಂದೆಯೂ ದಕ್ಕದು
ನಾನು ಕೇಳಿ ಪಡೆಯದ ವಸ್ತು
ನಿಮ್ಮದು ಮೃದುಭಾವನೆಗಳ ತುಡಿತಕೆ ವೇದಾಂತ ಹೇಳುವ ಶಿಸ್ತು

*
ಒಡಲಾಳದ ಆಸೆಗಳ ಬಯಲಿಗಿಟ್ಟ ಕೂಸು ನಾನು
ಒಂದ ಹನಿಯೂ ಬಿಡದೆ ಒಂದೊಂದನ್ನು ಹೆಕ್ಕಿ ಅನುಭವಿಸುವ ಆಸೆ ನನಗೆ
ನಗೆ ಬಿಡಿ ಹೂವ ಮುಡಿದು ಸಾಗಿರುವೆ ನಾನು
ನಗು ಬಾಡದಿರಲಿ ಅಳು ಬಾರದಿರಲೆಂಬ ಅಸ್ವಾಭಾವಿಕ ಆಸೆ ನನಗೆ

*
ದುರಂತಕ್ಕೆ ಕಾರಣ ಸಿಗದಿದ್ದಾಗ 
ಅದುವೇ ರೋಚಕ
ರೋಚಕ ಪ್ರೀತಿಯೊಳಗೆ ವಯಕ್ತಿಕತೆ ಮಾಯವಾದಾಗ 
ಅದುವೇ ದುರಂತ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ